ಪುಣೆಯ ಆರ್ಟ್ ಗ್ಯಾಲರಿಯಲ್ಲಿ ತನ್ನ ಚಿತ್ರ ಸಂಗ್ರಹದ ಪ್ರದರ್ಶನವನ್ನು ನಿಲ್ಲಿಸಲಾಗಿದೆ ಎಂದು ಛಾಯಾಗ್ರಾಹಕರೊಬ್ಬರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಾಲಗಂಧರ್ವ ರಂಗ ಮಂದಿರದ ಉಸ್ತುವಾರಿ ಸುನೀಲ್ ಮಾತೆ, ಛಾಯಾಗ್ರಾಹಕ ಅಕ್ಷಯ ಮಾಲಿ ಅವರ ಚಿತ್ರ ಸಂಗ್ರಹ ನಗ್ನತೆಯಿಂದ ತುಂಬಿದೆ. ಅವರು ಪ್ರದರ್ಶನದ ಥೀಮ್ ಅನ್ನು ಮೊದಲೇ ಆಡಳಿತ ಮಂಡಳಿಗೆ ತಿಳಿಸಬೇಕಿತ್ತು. ಯಾರೊಬ್ಬರ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಪ್ರದರ್ಶನಗಳನ್ನು ನಾವು ಅನುಮತಿಸುವುದಿಲ್ಲ. ಅಂತಹ ನಗ್ನತೆ ಆರ್ಟ್ ಗ್ಯಾಲರಿಯಲ್ಲಿ ಸೂಕ್ತವಾಗಿ ಕಾಣುವುದಿಲ್ಲ, ಹಾಗಾಗಿ ಚಿತ್ರ ಪ್ರದರ್ಶನವನ್ನ ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಜೆಎಂ ರಸ್ತೆಯಲ್ಲಿರುವ ಆರ್ಟ್ ಗ್ಯಾಲರಿಯಲ್ಲಿ ಶುಕ್ರವಾರದಂದು ಮಾಲಿಯ ಛಾಯಾಚಿತ್ರಗಳ ಮೂರು ದಿನಗಳ ಪ್ರದರ್ಶನ ಪ್ರಾರಂಭವಾಯಿತು. ಆದರೆ ಅದನ್ನು ಶನಿವಾರದಂದೇ ನಿಲ್ಲಿಸಲಾಯಿತು. ಪ್ರದರ್ಶನದ ವಿಷಯ ‘IT S ME’ ಎಂದು, ನನ್ನ ಹಾಗೂ ಇತರ ಮಾಡೆಲ್ ಗಳ ನಗ್ನ ಫೋಟೋಗಳನ್ನು ಪ್ರಕೃತಿಯಲ್ಲಿ ಕ್ಲಿಕ್ ಮಾಡಲಾಗಿದೆ. ನಗ್ನತೆ ಇದೆ ಎಂಬ ಒಂದೇ ಕಾರಣಕ್ಕೆ, ಹೀಗೆ ನನ್ನ ಚಿತ್ರಗಳ ಪ್ರದರ್ಶನ ನಿಲ್ಲಿಸಿರುವುದು ಕಲೆಗೆ ಗಡಿಯನ್ನ ಹಾಕಿದಂತಿದೆ ಎಂದು ಅಕ್ಷಯ್ ಮಾಲಿ ಹೇಳಿದ್ದಾರೆ.
ಶನಿವಾರ ಕಲಾ ಗ್ಯಾಲರಿಯ ಆಡಳಿತ ಮಂಡಳಿಯ ಕೆಲವರು ಈ ಛಾಯಾಚಿತ್ರಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಅವುಗಳನ್ನು ತೆಗೆಯುವಂತೆ ತಿಳಿಸಿದರು. ನಾನು ಸ್ಲಾಟ್ ಅನ್ನು ಬುಕ್ ಮಾಡಿದಾಗ, ಥೀಮ್ ಬಗ್ಗೆ ಮ್ಯಾನೇಜ್‌ಮೆಂಟ್‌ಗೆ ಹೇಳಿರಲಿಲ್ಲ. ಇದು ಛಾಯಾಗ್ರಹಣ ಪ್ರದರ್ಶನ ಎಂದು ನಮೂದಿಸಿ ನಾನು ಸ್ಲಾಟ್ ಅನ್ನು ಬುಕ್ ಮಾಡಿದ್ದೆ. ನಾನು ಗ್ಯಾಲರಿಯಲ್ಲಿ ನನ್ನ ಫೋಟೋಗಳನ್ನು ಪ್ರದರ್ಶಿಸುತ್ತಿರುವುದು ಇದೇ ಮೊದಲು, ಆದರೆ ನನ್ನ ಕಲೆಯು ಈ ರೀತಿಯ ವಿರೋಧವನ್ನು ಎದುರಿಸುತ್ತಿದೆ. ಕಲೆಗೆ ಯಾವುದೇ ನಿಯಮಗಳು ಅಥವಾ ಗಡಿಗಳಿಲ್ಲ, ಆದರೆ ಅದನ್ನು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಸೀಮಿತಗೊಳಿಸುವ ಪ್ರಯತ್ನ ನಡೆದಿದೆ ಎಂದು ಅಕ್ಷಯ್ ಮಾಲಿ ಬೇಸರ ವ್ಯಕ್ತಪಡಿಸಿದ್ದಾರೆ.