ಕೊರೋನಾ ಸಾಂಕ್ರಾಮಿಕ ರೋಗ ಕಾಲಿಟ್ಟ ಮೇಲೆ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು ಪ್ರಾರಂಭವಾಯಿತು. ಇದು ಮಕ್ಕಳ ಮೇಲಂತೂ ವ್ಯತಿರಿಕ್ತ ಪರಿಣಾಮ ಬೀರಿದೆ. ಟಿ.ವಿ ಮುಂದೆ ಕೂರುತ್ತಿದ್ದ ಮಕ್ಕಳಿಗೆ ಇದೀಗ ಮೊಬೈಲ್ ಗೀಳು ಶುರುವಾಗಿದೆ. ಇದರಿಂದ ಪೋಷಕರಿಗಂತೂ ಮಕ್ಕಳನ್ನು ಹೇಗಪ್ಪಾ ಸಂಭಾಳಿಸೋದು ಅಂತಾಗಿಬಿಟ್ಟಿದೆ. ಹಾಗಂತ ಮಕ್ಕಳನ್ನು ಸರಿದಾರಿಗೆ ಪೋಷಕರೇ ತರಬೇಕಾದುದು ಕರ್ತವ್ಯ. ಆದ್ರೆ, ಇಲ್ಲೊಬ್ಬ ತಂದೆ ತನ್ನ ಮಗನಿಗೆ ಕೊಟ್ಟ ಶಿಕ್ಷೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ…!
ಹೌದು, ಕ್ರೂರಿ ತಂದೆಯೊಬ್ಬ ತನ್ನ ಮಗ ಮೊಬೈಲ್ ನಲ್ಲಿ ಆಟವಾಡುತ್ತಿರುತ್ತಾನೆ ಎಂದು ಆಕ್ರೋಶಗೊಂಡು ಕೊಂದೇ ಬಿಟ್ಟಿದ್ದಾನೆ. ದೆಹಲಿಯ ಖಾನ್ಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 27 ವರ್ಷದ ಆದಿತ್ಯ ಪಾಂಡೆ ಎಂಬಾತ ತನ್ನ ಐದು ವರ್ಷದ ಪುತ್ರನನ್ನು ಹೊಡೆದು ಹತ್ಯೆ ಮಾಡಿದ್ದಾನೆ. ಪುತ್ರ ಜ್ಞಾನ್ ಪಾಂಡೆ ಅಲಿಯಾಸ್ ಉತ್ಕರ್ಷ್ ಎಂಬ ಪುಟ್ಟ ಬಾಲಕ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದ. ಪಾಠದ ಕಡೆಗೆ ಗಮನ ನೀಡುವ ಬದಲು ಮೊಬೈಲ್ ನಲ್ಲೇ ಕಾಲ ಕಳೆಯುತ್ತಿದ್ದಾನೆಂದು ಕೋಪಗೊಂಡ ಆರೋಪಿ ಈ ಕೃತ್ಯವೆಸಗಿದ್ದಾನೆ.
ತಂದೆಯ ಏಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆ ವೇಳೆಗಾಗಲೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಬಾಲಕನ ತಾಯಿ ಆಸ್ಪತ್ರೆಗೆ ಕರೆತರುವಾಗ ಬಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಆತನ ಕುತ್ತಿಗೆಯ ಮೇಲೆ ಗಾಯದ ಕಲೆಗಳು ಇದ್ದವು ಎನ್ನಲಾಗಿದೆ. ಇದೀಗ ತಂದೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.