ರಾಮನಗರ: ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆಗೆ ಬರುವವರಿಗೆ ಸಚಿವರುಗಳು ತೊಂದರೆ ನೀಡುತ್ತಿದ್ದಾರೆ. ಪಾದಯಾತ್ರೆಗೆ ಹೋಗದಂತೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಸರ್ಕಾರ ಯಾರನ್ನು ತಡೆಯಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಉದಯಿಸುವ ಸೂರ್ಯ, ಹರಿಯುವ ನೀರನ್ನು ತಡೆಯಲಾಗದು. ಅದೇ ರೀತಿ ನಮ್ಮ ಪಾದಯಾತ್ರೆಯನ್ನು ತಡೆಯಲು ಸಾಧ್ಯವಿಲ್ಲ. ಪಾದಯಾತ್ರೆಗೆ ಜಿಲ್ಲೆಯಲ್ಲಿ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಹೋರಾಟವಲ್ಲ. ಕುಡಿಯುವ ನೀರಿಗಾಗಿ ಪಕ್ಷಾತೀತವಾಗಿ ನಡೆಸಬೇಕಾಗಿರುವ ಹೋರಾಟ. ಹಾಗಾಗಿ ಎಲ್ಲರೂ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದೇವೆ ಎಂದರು.
ರಾಜ್ಯ ಬಿಜೆಪಿ ಸರ್ಕಾರ ಪಾದಯಾತ್ರೆ ತಡೆಯಲು ಹಲವು ಪ್ರಯತ್ನ ನಡೆಸಿದೆ. ಎಸ್ ಪಿ, ಡಿಸಿ ಗಳು ಏನು ಮಾಡುತ್ತಾರೆ. ನನ್ನ ಮೇಲೆ ಸಿದ್ದರಾಮಯ್ಯ ಮೇಲೆ ಕೇಸ್ ಹಾಕಬಹುದು. ಅದೇನು ಮಾಡಿದರೂ ನಮ್ಮ ನೀರಿಗಾಗಿ ನಮ್ಮ ಹೋರಾಟ ನಡೆಯುತ್ತೆ. ಪಾದಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.