ಮಹಿಳೆಯರ ವಿರುದ್ಧ ನಡೆಯುತ್ತಿರುವ ಅತ್ಯಂತ ದೊಡ್ಡ ಅತ್ಯಾಚಾರವೆಂದರೆ ಅದು ವೈವಾಹಿಕ ಅತ್ಯಾಚಾರ ಎಂದು ವಕೀಲರೊಬ್ಬರು ದೆಹಲಿ ಹೈಕೋರ್ಟ್‌ನಲ್ಲಿ ತಿಳಿಸಿದ್ದಾರೆ. ಇದರ ಬೆನ್ನಿಗೆ ದೆಹಲಿ ಸರ್ಕಾರವು, ಇಂಥ ಕೃತ್ಯವು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ’ಕ್ರೂರತೆಯ ಅಪರಾಧ’ ಎಂದು ಅದಾಗಲೇ ಒಳಗೊಂಡಿದೆ ಎಂದು ತಿಳಿಸಿದೆ. ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸುವ ಸಂಬಂಧ ಸಲ್ಲಿಸಲಾದ ಒಂದಷ್ಟು ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಆಲಿಕೆ ಮಾಡುತ್ತಿದೆ.
ಶಾಲೆಯಲ್ಲಿ ವಿದ್ಯಾರ್ಥಿನಿ ನಗ್ನಗೊಳಿಸಿ ಥಳಿಸಿ ಫ್ಯಾನ್ ಕೆಳಗೆ ಕೂರಿಸಿದ ಮುಖ್ಯಶಿಕ್ಷಕಿ ಅಮಾನತಿಗೆ ಶಿಫಾರಸು
“ನಮ್ಮ ಮನೆಗಳ ಗೋಡೆಗಳ ನಡುವೆಯೇ ನಡೆಯುತ್ತಿರುವ ಅತ್ಯಂತ ದೊಡ್ಡ ಅಪರಾಧಗಳಲ್ಲಿ ಒಂದು ವೈವಾಹಿಕ ಅತ್ಯಾಚಾರ. ಮದುವೆಯೆಂಬ ಸಂಸ್ಥೆಯೊಳಗೆ ಅದೆಷ್ಟು ಬಾರಿ ಅತ್ಯಾಚಾರ ನಡೆದು ಅದು ಮುಚ್ಚಿಹೋಗಿಲ್ಲ ? ಈ ಬಗ್ಗೆ ವರದಿಗಳಾಗಿಲ್ಲ ಹಾಗೂ ವಿಶ್ಲೇಷಣೆಗಳಾಗಿಲ್ಲವೇ ?” ಎಂದು ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ತಿಳಿಸಿದ್ದು, ಇಂಥ ಸಂತ್ರಸ್ತರ ನೆರವಿಗೆ ಖುದ್ದು ಅವರದ್ದೇ ಕುಟುಂಬಗಳಾಗಲೀ ಅಥವಾ ಪೊಲೀಸರು ಬರಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಆರ್‌ಐಟಿ ಪ್ರತಿಷ್ಠಾನ, ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಸಂಘಟನೆ ಎಂಬ ಎನ್‌ಜಿಓಗಳು ಮತ್ತು ಭಾರತದಲ್ಲಿರುವ ಅತ್ಯಾಚಾರ ಕಾನೂನಿನಲ್ಲಿ ಪುರುಷರಿಗೆ ನೀಡಲಾಗಿರುವ ವಿನಾಯಿತಿಗಳನ್ನು ತೆಗೆದುಹಾಕಬೇಕೆಂದು ಕೋರಿ ಬಂದಿರುವ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷ ಸಲ್ಲಿಸಿದ್ದಾರೆ.
ಜಗತ್ತಿನಾದ್ಯಂತ ಎಲ್ಲಾ ಕೋರ್ಟ್‌ಗಳು ವೈವಾಹಿಕ ಅತ್ಯಾಚಾರಗಳನ್ನು ಅಪರಾಧವೆಂದು ಪರಿಗಣಿಸಿದ್ದು, ಲೈಂಗಿಕ ಸಂಬಂಧಗಳಿಗೆ ಮಡದಿಯರ ಸಮ್ಮತಿ ಬೇಕಿಲ್ಲವೆಂಬುದನ್ನು ಕಿತ್ತೊಗೆದಿರುವುದಾಗಿ ತಿಳಿಸಿದ ಗೊನ್ಸಾಲ್ವೆಸ್, ನ್ಯಾಯಾಧೀಶರಾದ ರಾಜೀವ್ ಶಕ್ದೆರ್ ಮತ್ತು ಸಿ ಹರಿ ಶಂಕರ್ ಇದ್ದ ಪೀಠದ ಮುಂದೆ ಭಿನ್ನವಿಸಿಕೊಂಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ದೆಹಲಿ ಸರ್ಕಾರದ ಪರ ವಕೀಲೆ ನಂದಿತಾ ರಾವ್, “ವೈವಾಹಿಕ ಅತ್ಯಾಚಾರವು ಭಾರತದಲ್ಲಿರುವ ಕ್ರೂರತೆಯ ಅಪರಾಧವಾಗಿದೆ. ಮದುವೆಯಾದ ಮಹಿಳೆಯರು ಮತ್ತು ಅವಿವಾಹಿತ ಮಹಿಳೆಯರು ಪ್ರತಿಯೊಂದು ಕಾನೂನಿನ ಅಡಿ ಭಿನ್ನವಾಗಿ ಬರುತ್ತಾರೆಯೇ ?” ಎಂದು ಪ್ರಶ್ನಿಸಿದ್ದು, ವೈವಾಹಿಕ ಅತ್ಯಾಚಾರದ ಪ್ರಕರಣಗಳನ್ನೂ ಸಹ ವಿವಾಹಿತ ಮಹಿಳೆಯೊಬ್ಬರ ವಿರುದ್ಧ ಆಕೆಯ ಪತಿ ಹಾಗೂ ಆತನ ಕುಟುಂಬಸ್ಥರು ಮಾಡಿದ ದೌರ್ಜನ್ಯಗಳಿಗೆ ಸಂಬಂಧಪಟ್ಟ ಸೆಕ್ಷನ್ 498ಎ ಅಡಿಯಲ್ಲೇ ವಿಚಾರಣೆ ಮಾಡಲಾಗುತ್ತಿದೆ ಎಂದಿದ್ದಾರೆ.
ಮಹಿಳೆಯರ ಹಕ್ಕುಗಳ ಸಂಬಂಧ ಮೌಲ್ಯಗಳ ವ್ಯವಸ್ಥೆಗಳು ಕಾಲಕಾಲಿಕವಾಗಿ ಮಾರ್ಪಾಡಾಗುತ್ತಾ ಬಂದಿದ್ದು, ಬ್ರಿಟನ್, ಅಮೆರಿಕ, ಕೆನಡಾ, ಐರೋಪ್ಯ ದೇಶಗಳ ಕೋರ್ಟ್‌ಗಳ ಆದೇಶಗಳ ಅನುಸಾರ ಬದಲಾಗುತ್ತಿವೆ ಎಂದ ಗೊನ್ಸಾಲ್ವೆಸ್, ವೈವಾಹಿಕ ಅತ್ಯಾಚಾರ ಒಂದು ’ಪಾಶ್ಚಾತ್ಯ ವಿಚಾರ’ ಎಂದು ಭಾವಿಸುವುದು ಸರಿಯಲ್ಲ ಎಂದಿದ್ದು, ಭಾರತದ ರಾಜ್ಯಗಳಲ್ಲೂ ಸಹ ದಂಪತಿಗಳ ನಡುವೆ ವೈವಾಹಿಕ ಅತ್ಯಾಚಾರ ನಡೆಯುತ್ತಿದೆ ಎಂದು ವಿಶ್ವ ಸಂಸ್ಥೆಯ ವರದಿಯೊಂದು ತಿಳಿಸಿರುವ ವಿಷಯ ಉಲ್ಲೇಖ ಮಾಡಿದ್ದಾರೆ.
2018ರಲ್ಲಿ, ಪ್ರಕರಣದ ಆಲಿಕೆ ನಡೆಸುತ್ತಿದ್ದ ಕಿರಿಯ ನ್ಯಾಯಾಲಯವೊಂದರ ಮುಂದೆ ತನ್ನ ವಿಚಾರ ಮುಂದಿಟ್ಟಿದ್ದ ನಗರಾಡಳಿತ, ಸಂಗಾತಿಯೊಬ್ಬರು ಮತ್ತೊಬ್ಬ ಸಂಗಾತಿಯ ಸಹಮತಿ ಇಲ್ಲದೇ ಲೈಂಗಿಕ ಸಂಬಂಧದಲ್ಲಿ ಭಾಗಿಯಾಗಿದ್ದರೆ, ಅದು ಐಪಿಸಿ ಅಡಿ ಅಪರಾಧ ಎಂದಾಗುವುದಲ್ಲದೇ, 21ನೇ ವಿಧಿಯಡಿ (ಜೀವ ಮತ್ತು ವೈಯಕ್ತಿಕ ಸ್ವಾತಂತ್ರ‍್ಯದ ರಕ್ಷಣೆ) ಮಹಿಳೆಗೆ ತನ್ನ ಪತಿಯೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುವ ವಿಚಾರದಲ್ಲಿ ನಿರ್ಣಯ ತೆಗೆದುಕೊಳ್ಳುವ ಹಕ್ಕಿರುವುದಾಗಿ ತಿಳಿಸಿತ್ತು.
ಇದೇ ಪ್ರಕರಣದಲ್ಲಿ ತನ್ನ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಮಾಡಿದಲ್ಲಿ ಮದುವೆ ಎನ್ನುವ ಸಂಸ್ಥೆ ದುರ್ಬಲಗೊಂಡು, ಪತಿಯರಿಗೆ ಕಿರುಕುಳ ನೀಡಲು ಮಹಿಳೆಯರಿಗೆ ಸುಲಭದ ಉಪಕರಣವೊಂದನ್ನು ಕೊಟ್ಟಂತಾಗುತ್ತದೆ ಎಂದಿತ್ತು.
ಭಾರತೀಯ ದಂಡ ಸಂಹಿತೆಯ 375ನೇ ವಿಧಿಯು ತಮ್ಮ ಪತಿಯರಿಂದ ಲೈಂಗಿಕವಾಗಿ ಹಲ್ಲೆಗೊಳಗಾದ ಮಹಿಳೆಯರ ವಿರುದ್ಧ ತಾರತಮ್ಯದ ಧೋರಣೆ ಹೊಂದಿದೆ ಎಂದು ಅರ್ಜಿದಾರ ಎನ್‌ಜಿಓ ಪ್ರಶ್ನಿಸಿದ್ದು, ಅದರ ಸಾಂವಿಧಾನಿಕ ಸಿಂಧುತ್ವವನ್ನೇ ಪ್ರಶ್ನಸಿದೆ.
ಪ್ರಕರಣದ ಮುಂದಿನ ಆಲಿಕೆಯನ್ನು ಜನವರಿ 10ಕ್ಕೆ ನಿರ್ಧರಿಸಲಾಗಿದೆ.