ಭಾರತವನ್ನ ಆತಂಕಕ್ಕೆ ದೂಡಿರುವ ಒಮಿಕ್ರಾನ್ ಬಗ್ಗೆ ದಿನಕ್ಕೊಂದು ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಉಳಿದ ರೂಪಾಂತರಿಗಳಿಗಿಂತ ಹೆಚ್ಚು ಮ್ಯೂಟೆಂಟ್ ಆಗಿರುವ ಒಮಿಕ್ರಾನ್ ಮಕ್ಕಳಿಗೆ ಮಾರಕವಾಗಿ ಪರಿಣಮಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಧ್ಯಕ್ಕಿರುವ ವೈಜ್ಞಾನಿಕ ಅಧ್ಯಯನದಲ್ಲಿ ಒಮಿಕ್ರಾನ್ ಶ್ವಾಸಕೋಶದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ತಿಳಿದಿದೆ.
ಉಸಿರಾಟ ಹಾಗೂ ಶ್ವಾಸಕೋಶ ಅಂತಾ ಬಂದರೆ ಪುಟ್ಟ ಮಕ್ಕಳು ಹೆಚ್ಚು ಆ್ಯಕ್ಟಿವ್ ಆಗಿರುವುದರಿಂದ ಅವರ ಉಸಿರಾಟದ ಪ್ರಮಾಣ ಜಾಸ್ತಿ ಇರುತ್ತದೆ, ಆದರೆ ಅವರ ಶ್ವಾಸಕೋಶ ಹಾಗೂ ಉಸಿರಾಟದ ನಾಳಗಳು ಸಣ್ಣದಾಗಿರುವುದರಿದ, ಒಮಿಕ್ರಾನ್ ನಿಂದ ಸೋಂಕಿತರಾಗೋ ಮಕ್ಕಳಲ್ಲಿ ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆ ಉಂಟಾಗಬಹುದು ಎಂದು ನವದೆಹಲಿಯ ಬಾಲಾಜಿ ಮೆಡಿಕಲ್ ಸಂಸ್ಥೆಯ, ಹಿರಿಯ ವೈದ್ಯ ಅನಿಮೇಶ್ ಆರ್ಯ ತಿಳಿಸಿದ್ದಾರೆ. ವಯಸ್ಕರಿಗಿಂತ ಮಕ್ಕಳಿಗೆ ಒಮಿಕ್ರಾನ್ ರೂಪಾಂತರಿಯಿಂದ ತೊಂದರೆಯಾಗುವ ಸಾಧ್ಯತೆ ಇದೆ ಎಂಬುದು ಆರ್ಯ ಅವರ ಅಭಿಪ್ರಾಯ.
ಗುರುಗ್ರಾಮದ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯ ತುಷಾರ್ ಅವರ ಪ್ರಕಾರ ಈ ಒಮಿಕ್ರಾನ್ ವೇರಿಯಂಟ್ ಮಕ್ಕಳು ಹಾಗೂ ವಯಸ್ಕರು ಇಬ್ಬರಲ್ಲೂ ಒಂದೇ ತರಹದ ಲಕ್ಷಣಗಳನ್ನ ಗೋಚರಪಡಿಸುತ್ತಿದೆ. ಈ ವೈರಸ್ ತಗುಲಿದ ಮಕ್ಕಳಲ್ಲೂ ವಯಸ್ಕರಿಗೆ ಕಾಡುವಂತ ಗಂಟಲು ಕೆರೆತ, ನೆಗಡಿ, ಕೆಮ್ಮು, ಜ್ವರದಂತಹ ಲಕ್ಷಣಗಳೇ ಪತ್ತೆಯಾಗಿವೆ. ಇಂತಾ ಸಂದರ್ಭದಲ್ಲಿ ಪೋಷಕರು ಮಕ್ಕಳ ಬಗ್ಗೆ ತೀವ್ರ ನಿಗಾವಹಿಸಬೇಕಿದೆ.
ಸಿಡಿಸಿ ವರದಿಯ ಪ್ರಕಾರ ಅಮೆರಿಕಾದಲ್ಲಿ ಕಳೆದ ವಾರದಿಂದ ದಿನಕ್ಕೆ ಕಡಿಮೆಯೆಂದರೂ 700 ಮಕ್ಕಳು ಕೊರೋನಾಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದು ಇಡೀ ಸಾಂಕ್ರಾಮಿಕದಲ್ಲೆ ಅತಿದೊಡ್ಡ ಅಂಕಿಅಂಶ. ಮತ್ತೆ ಇದೇ ಸಿಡಿಸಿಯ ಅಧ್ಯಯನದಲ್ಲಿ ಕೊರೋನಾ ಸೋಂಕಿನಿಂದ ಸುಧಾರಿಸಿಕೊಂಡ ಮಕ್ಕಳಲ್ಲಿ ಡಯಾಬಿಟಿಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಮಕ್ಕಳ ಬಗ್ಗೆ ಎಚ್ಚರ ವಹಿಸಿ, ಅವ್ರನ್ನ ಹೊರಗೆ ಕಳುಹಿಸಬೇಡಿ, ಕೊರೋನಾದ ಬಗ್ಗೆ ಎಚ್ಚರವಿರಲಿ ಎಂದು ಡಾ ತುಷಾರ್ ಹೇಳಿದ್ದಾರೆ.