ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ದೇವಾಲಯದ ಅಧಿಕಾರಿಗಳಿಗೆ ದೇವಾಲಯದ ಮುಖ್ಯ ವಿಗ್ರಹದ ಪರಿಶೀಲನೆಗಾಗಿ ನ್ಯಾಯಾಲಯದ ಮುಂದೆ ವಿಗ್ರಹ ಹಾಜರುಪಡಿಸುವಂತೆ ಹೇಳಿದ್ದ ಕೆಳಹಂತದ ನ್ಯಾಯಾಲಯದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.
ಕುಂಭಕೋಣಂನ ಕೆಳ ಹಂತದ ನ್ಯಾಯಾಲಯವು ಸಿವಿರಿಪಾಳ್ಯಂನ ಪರಮಶಿವನ್ ಸ್ವಾಮಿ ದೇವಸ್ಥಾನದಲ್ಲಿ ಕಳುವಾಗಿದ್ದ ಮೂಲ ವಿಗ್ರಹವನ್ನು ಪತ್ತೆ ಹಚ್ಚಿ ಪುನರ್ಪ್ರತಿಷ್ಠಾಪನೆ ಮಾಡಿದ್ದ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿತ್ತು.
ಗುರುವಾರ ತನ್ನ ಆದೇಶವನ್ನು ಪ್ರಕಟಿಸಿದ ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಆರ್. ಸುರೇಶ್ ಕುಮಾರ್, ಭಕ್ತರ ದೃಷ್ಟಿಯಲ್ಲಿ ಮೂರ್ತಿಯು ದೇವರ ರೂಪವಾಗಿರುವ ಕಾರಣ ಅದನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬಾರದು. ಅಪರಾಧದ ವಸ್ತುವಂತೆ ಬಿಂಬಿಸಿ ದೇವರ ಮೂರ್ತಿಯನ್ನು ತಪಾಸಣೆಗೆಂದು ನ್ಯಾಯಾಲಯಕ್ಕೆ ಕರೆಯುವಂತಿಲ್ಲ ಎಂದು ಹೇಳಿದ್ದಾರೆ.
ವಿಗ್ರಹವನ್ನು ಎಲ್ಲಿಯೂ ಸ್ಥಳಾಂತರಿಸದೇ, ಭಕ್ತರ ಭಾವನೆಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆಯನ್ನುಂಟು ಮಾಡದೇ ಪರಿಶೀಲನೆ ಮಾಡಲು ಆಯುಕ್ತರನ್ನು ನೇಮಕ ಮಾಡಬಹುದು ಎಂದು ಆದೇಶದಲ್ಲಿ ಸಲಹೆ ನೀಡಲಾಗಿದೆ. ಕಮಿಷನರ್ ವಿಗ್ರಹ ಪರಿಶೀಲನೆ ನಡೆಸಿದ ವಿವರವಾದ ವರದಿಯನ್ನು ಕೋರ್ಟ್ಗೆ ಸಲ್ಲಿಸಬಹುದು ಎಂದು ಹೇಳಲಾಗಿದೆ.
ವಿಗ್ರಹವನ್ನು ಅದರ ಪೀಠದಿಂದ ಮೇಲಕ್ಕೆತ್ತಿ ನ್ಯಾಯಾಲಯದ ಎದುರು ಹಾಜರುಪಡಿಸಿ ಎಂದು ಹೇಳಿದ್ದ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು.