ಉನ್ನಾವ್: ರೈತರೊಬ್ಬರು ಬಿಜೆಪಿ ಶಾಸಕರೊಬ್ಬರಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮೂರು ದಿನಗಳ ಹಿಂದೆ ಘಟನೆ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲಿದ್ದ ಉನ್ನಾವ್ನ ಬಿಜೆಪಿ ಶಾಸಕ ಪಂಕಜ್ ಗುಪ್ತಾ ಅವರ ಬಳಿ, ಹಸಿರು ಟೋಪಿ ಧರಿಸಿದ್ದ ಒಬ್ಬ ವಯಸ್ಸಾದ ವ್ಯಕ್ತಿ ಸಮೀಪಕ್ಕೆ ಬರುತ್ತಾರೆ. ನಂತರ ಗುಪ್ತಾ ಮುಖದ ಮೇಲೆ ಕಪಾಳಮೋಕ್ಷ ಮಾಡಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಕೂಡಲೇ ರೈತನನ್ನು ವೇದಿಕೆಯಿಂದ ಕೆಳಗಿಳಿಸಿದ್ದಾರೆ.
ಈ ಬಗ್ಗೆ ವಿಡಿಯೋ ಸಹಿತ ಟ್ವೀಟ್ ಮಾಡಿದ ಸಮಾಜವಾದಿ ಪಕ್ಷ, ಬಿಜೆಪಿ ಶಾಸಕ ಪಂಕಜ್ ಗುಪ್ತಾ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ರೈತ ಮುಖಂಡರೊಬ್ಬರು ಶಾಸಕರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದು ಶಾಸಕರಿಗೆ ಮಾಡಿದ್ದಲ್ಲ. ಬದಲಾಗಿ, ಬಿಜೆಪಿ ನೇತೃತ್ವದ ಯೋಗಿ ಆದಿತ್ಯನಾಥ್ ಸರ್ಕಾರದ ಕಳಪೆ ನೀತಿ, ಕಳಪೆ ಆಡಳಿತ ಮತ್ತು ನಿರಂಕುಶಾಧಿಕಾರಕ್ಕಾಗಿ ಅವರು ಕಪಾಳಮೋಕ್ಷ ಮಾಡಿದ್ದಾರೆ ಎಂಬುದಾಗಿ ಟ್ವೀಟ್ ಮಾಡಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಸಂಬಂಧ ರೈತನ ಜೊತೆಯೇ ಪತ್ರಿಕಾಗೋಷ್ಠಿ ನಡೆಸಿದ ಶಾಸಕರು, ಅವರು ತನಗೆ ಕಪಾಳಮೋಕ್ಷ ಮಾಡಿಲ್ಲ. ಪ್ರೀತಿಯಿಂದ ಕೆನ್ನೆ ತಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಶಾಸಕರಿಗೆ ಕಪಾಳಮೋಕ್ಷ ಮಾಡಿಲ್ಲ. ಈ ರೀತಿ ಪ್ರೀತಿಯಿಂದ ಅನೇಕ ಬಾರಿ ಅವರಿಗೆ ಹೊಡೆದಿದ್ದೇನೆ ಎಂದು ರೈತ ಹೇಳಿದ್ದಾರೆ.
ಅವರು ತನ್ನ ತಂದೆಯಂತೆ ಮತ್ತು ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ತನ್ನನ್ನು ಪ್ರೀತಿಯಿಂದ ಕೆನ್ನೆಗೆ ತಟ್ಟಿದ್ದು, ಕಪಾಳಮೋಕ್ಷ ಮಾಡಿಲ್ಲ. ಪ್ರತಿಪಕ್ಷಗಳು ಎಡಿಟ್ ಮಾಡಿದ ವಿಡಿಯೋವನ್ನು ಪ್ರಸಾರ ಮಾಡುತ್ತಿವೆ ಎಂದು ಕಿಡಿಕಾರಿದ ಅವರು, ಅಂಥದ್ದೇನೂ ಸಂಭವಿಸಿಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.