ದೇಶದಲ್ಲಿ ಕೊರೊನಾ ಮೂರನೇ ಅಲೆ ಶುರುವಾಗಿದೆ. ಕೊರೊನಾ ರೂಪಾಂತರ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಒಮಿಕ್ರಾನ್ ರೋಗ ಲಕ್ಷಣ ಹಾಗೂ ಅದ್ರಿಂದ ರಕ್ಷಣೆ ಪಡೆಯಲು ಏನು ಮಾಡಬೇಕು ಎನ್ನುವ ಬಗ್ಗೆ ಈಗಾಗಲೇ ತಜ್ಞರು ಸಲಹೆ ನೀಡಿದ್ದಾರೆ. ಒಮಿಕ್ರಾನ್ ಸೋಂಕಿಗೆ ಒಳಗಾದವರಿಗೆ ಹಸಿವಾಗುವುದಿಲ್ಲ. ಹಸಿವಿಲ್ಲ ಎಂಬ ಕಾರಣಕ್ಕೆ ಜನರು ಆಹಾರದಿಂದ ದೂರವಿರ್ತಾರೆ. ಆದ್ರೆ ಇದು ತಪ್ಪು.
ಒಮಿಕ್ರೋನ್ ಸೋಂಕಿತರಿಗೆ ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ವಿಪರೀತ ನೋವಿನಿಂದ ಜನರಿಗೆ ಆಹಾರ ಸೇವನೆ ಸಾಧ್ಯವಾಗುವುದಿಲ್ಲ. ಇಂಥ ಸಂದರ್ಭದಲ್ಲಿ ಕೆಲ ಆಹಾರ ಸೇವನೆ ಮಾಡಿ, ಆರೋಗ್ಯ ಕಾಪಾಡಿಕೊಳ್ಳಬೇಕು.
ಒಮಿಕ್ರಾನ್ ಸೋಂಕಿಗೆ ಒಳಗಾದವರು ಮೊಸರು ಸೇವನೆ ಮಾಡುವುದು ಒಳ್ಳೆಯದು ಎನ್ನಲಾಗಿದೆ. ಗಂಟಲು ನೋವಿರುವವರು ಮೊಸರಿನೊಂದಿಗೆ ಬಾಳೆಹಣ್ಣನ್ನು ಸೇವನೆ ಮಾಡಬಹುದು. ಆದ್ರೆ ಇದನ್ನು ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಕೆಲವೊಬ್ಬರಿಗೆ ಬಾಳೆಹಣ್ಣು ಶೀತವನ್ನುಂಟು ಮಾಡುತ್ತದೆ.
ಗಂಟಲು ನೋವನ್ನು ಕಡಿಮೆ ಮಾಡಲು ಸೂಪ್ ಸೇವನೆ ಮಾಡಬೇಕು. ಸೂಪ್ ಗೆ ತರಕಾರಿ ಸೇರಿಸುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ನಿಶಕ್ತಿ ಕಡಿಮೆಯಾಗುತ್ತದೆ. ದೇಹಕ್ಕೆ ಬೇಕಾದ ಪೋಷಕಾಂಶ ಸಿಗುತ್ತದೆ.
ಹಸಿರು ತರಕಾರಿ ಸೇವನೆಯನ್ನು ಅಗತ್ಯವಾಗಿ ಮಾಡಬೇಕು. ಹಸಿರು ಸೊಪ್ಪಿನ ಸೇವನೆ ಒಳ್ಳೆಯದು. ಪಾಲಕ್, ಸಾಸಿವೆ, ಎಲೆಕೋಸು, ಹೂಕೋಸನ್ನು ಬೇಯಿಸಿ, ಹಿಸುಕಿ ತಿನ್ನಿರಿ. ಇದಲ್ಲದೆ, ಮೆಂತ್ಯ ಸೊಪ್ಪನ್ನು ಕೂಡ ಬಳಸಬಹುದು.
ಒಮಿಕ್ರಾನ್ ರೋಗಿಗಳು ಲಘು ಆಹಾರವನ್ನು ಸೇವಿಸುವುದು ಮುಖ್ಯ. ಪ್ರೋಟೀನ್ ಶೇಕ್ ತೆಗೆದುಕೊಳ್ಳಬಹುದು. ಎಲೆಕ್ಟ್ರಲ್ ಪೌಡರ್ ಅಥವಾ ಎಲೆಕ್ಟ್ರೋಲೈಟ್ ಪಾನೀಯ ಸೇವನೆ ಮಾಡಬೇಕು. ವಿಟಮಿನ್ ಸಿ ಹೆಚ್ಚಿರುವ ಹಣ್ಣುಗಳನ್ನು ಸೇವನೆ ಮಾಡಬೇಕು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದ್ರೆ ಇದು ಗಂಟಲು ನೋವನ್ನು ಹೆಚ್ಚಿಸಬಹುದು. ಹಾಗಾಗಿ ಸೇವನೆಗೂ ಮುನ್ನ ಇದ್ರ ಬಗ್ಗೆ ಗಮನವಿರಲಿ.