ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಕಿಡಿಕಾರಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಕಾನೂನು ಪಾಲಿಸದವರಿಗೆ ವಿಪಕ್ಷ ಅಂತ ಕರೆಯಲಾಗುತ್ತಾ ? ಮುಂದೊಂದು ದಿನ ಇವರೇ ಆಡಳಿತ ನಡೆಸಿದಾಗ ವಿಪಕ್ಷಗಳು ಛೀಮಾರಿ ಹಾಕಿದಾಗ ಹೇಗನಿಸುತ್ತೆ ? ಎಂದು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಕೋವಿಡ್ ನಂತಹ ಇಂಥ ಸಂದರ್ಭದಲ್ಲಿ, ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ರಾಜಕಾರಣಕ್ಕಾಗಿ ಪಾದಯಾತ್ರೆ ಮಾಡುವುದು ಎಷ್ಟು ಸರಿ ? ಕನಿಷ್ಠ ತಿಳುವಳಿಕೆಯಾದರೂ ಕಾಂಗ್ರೆಸ್ ನವರಿಗೆ ಇರಬೇಕಿತ್ತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ನವರು ಕುದುರೆ ರೇಸ್ ಆದರೂ ಮಾಡಲಿ, ಮ್ಯಾರಥಾನ್ ಆದರೂ ಮಾಡಲಿ….. ಈಗಾಗಲೇ ಜಟಕಾ ಗಾಡಿ, ಎತ್ತಿನ ಗಾಡಿಯಲ್ಲಿ ಹೋಗಿದ್ದಾಗಿದೆ. ಇವೆಲ್ಲವೂ ಅವರ ಆರೋಗ್ಯಕ್ಕೆ ಒಳ್ಳೆಯದು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ಸಮಯ, ಸಂದರ್ಭ ನೋಡಿ ಹೋರಾಟ ಮಾಡಲಿ. ಕೋವಿಡ್ ಮಾರ್ಗಸೂಚಿಯನ್ನೇ ಉಲ್ಲಂಘಿಸಿ ಬೇಜವಾಬ್ದಾರಿಯಿಂದ ವರ್ತಿಸಿದರೆ ಹೇಗೆ ? 25 ಸಾವಿರ ಜನರನ್ನು ಕರೆತಂದು ಹೋರಾಟಕ್ಕೆ ನಿಂತಿರುವುದು ಎಷ್ಟು ಸರಿ ಎಂಬುದನ್ನು ಕಾಂಗ್ರೆಸ್ ಆಲೋಚಿಸಲಿ ಎಂದು ಗುಡುಗಿದರು.