
ಕೊರೊನಾ ಸೋಂಕಿತರು ದೇಶದಲ್ಲಿ ಪ್ರತಿದಿನ 25 ಸಾವಿರಕ್ಕೂ ಅಧಿಕ ವರದಿಯಾಗುತ್ತಿದ್ದಾರೆ. ಮೂರನೇ ಅಲೆಯ ಅಬ್ಬರ ಶುರುವಾಗಿದೆ. ಹಾಗಾಗಿ ಅನೇಕ ರಾಜ್ಯಗಳು ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಹೇರಿಕೆ ಮಾಡಿ ಜನದಟ್ಟಣೆ ತಡೆಗೆ ಮುಂದಾಗಿವೆ.
ಆ ಪೈಕಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದ 55 ಗಂಟೆಗಳ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ. ಇದಕ್ಕೆ ದೆಹಲಿ ನಿವಾಸಿಗಳಲ್ಲಿ ಅನೇಕರು ಅಸಮಾಧಾನ ಹೊರಹಾಕಿದ್ದಾರೆ. ತಾವು ಮನೆಗಳಲ್ಲೇ ಬಂಧಿ ಆಗಿರುವುದು ಕಷ್ಟ, ವ್ಯವಹಾರವಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ನಡುವೆ ಪುನೀತ್ ಶರ್ಮಾ ಎಂಬ ಮಹಾನುಭಾವನೊಬ್ಬ ದೆಹಲಿ ಪೊಲೀಸರಿಗೆ ಟ್ವೀಟ್ ಮಾಡಿ, ’’ನಾನು ಸಾಮಾಜಿಕ ಅಂತರ ಕಾಪಾಡಿಕೊಂಡು ಹಾಗೂ ಮಾಸ್ಕ್ ಧರಿಸಿ ಕ್ರಿಕೆಟ್ ಆಡಬಹುದೇ?’’ ಎಂದು ಪ್ರಶ್ನಿಸಿದ್ದಾನೆ.
ಒಟ್ಟಿನಲ್ಲಿ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಯತ್ನ ಆತನದ್ದು. ಇದಕ್ಕೆ ಕ್ರಿಕೆಟ್ ಭಾಷೆಯಲ್ಲಿ ತಿರುಗೇಟು ಕೊಟ್ಟಿರುವ ದೆಹಲಿ ಪೊಲೀಸರು, ’’ಎಂಥ ಸಿಲ್ಲಿ ಪಾಯಿಂಟ್ ಸಾರ್ ನಿಮ್ಮದು. ಕೊರೊನಾದ ಈ ಸಮಯದಲ್ಲಿ ಎಕ್ಸ್‌ಟ್ರಾ ಕವರ್ ಅಗತ್ಯ. ಜತೆಗೆ ದೆಹಲಿ ಪೊಲೀಸರು ಕ್ಯಾಚ್ ಹಿಡಿಯುವುದರಲ್ಲಿ ನಿಸ್ಸೀಮರು,’’ ಎಂದು ಟ್ವೀಟ್ ಮೂಲಕ ಉತ್ತರಿಸಿದ್ದಾರೆ.
ಅಂದರೆ, ಎಂಥ ಸಿಲ್ಲಿ ಪ್ರಶ್ನೆ ಕೇಳಿದ್ದೀರಿ. ಕೊರೊನಾ ಹೆಚ್ಚುತ್ತಿರುವ ಸಮಯದಲ್ಲಿಹೆಚ್ಚು ಜಾಗರೂಕತೆ ವಹಿಸಬೇಕು. ಬದುಕಿದ್ದರೆ ಜೀವನ ಪೂರ್ತಿ ಕ್ರಿಕೆಟ್ ಆಡಬಹುದು. ಕರ್ಫ್ಯೂ ಉಲ್ಲಂಘಿಸಿದ್ದು ಕಂಡುಬಂದರೆ ದೆಹಲಿ ಪೊಲೀಸರು ಎತ್ತಿಹಾಕಿಕೊಂಡು ಹೋಗುವುದರಲ್ಲಿ ನಂ.1 ಎಂದು ಗದರಿದ್ದಾರೆ.
ದೆಹಲಿ ಪೊಲೀಸರ ಈ ಕ್ರಿಯಾಶೀಲತೆಗೆ ಟ್ವೀಟಿಗರು ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ. ಕೊರೊನಾ ಎಂಬ ಸಾಂಕ್ರಾಮಿಕ ಅಂತ್ಯಗೊಳಿಸುವ ಹೊಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಅದು ಸರಕಾರದ ಹೊಣೆ ಅಲ್ಲ. ಜನಸಾಮಾನ್ಯರು ಮುನ್ನೆಚ್ಚರಿಕೆ ಪಾಲಿಸಿದರೆ ಮಾತ್ರವೇ ಕೊರೊನಾ ಮಣಿಸಲು ಸಾಧ್ಯ. ಅದು ಬಿಟ್ಟು, ಮನರಂಜನೆ, ಟೈಮ್‌ಪಾಸ್‌ಗಳಿಗೆ ಗಂಟುಬಿದ್ದು ಕೊರೊನಾ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಆಸ್ಪತ್ರೆಗೆ ದಾಖಲಾತಿ ಕಾಯಂ ಆಗಲಿದೆ. ಆಗ ಪಶ್ಚಾತ್ತಾಪ ಪಡಬೇಕಾಗಬಹುದು ಎಂಬ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.