
ಅಹಮದಾಬಾದ್: ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದಕ್ಕೆ ಪತಿ ತನಗೆ ಥಳಿಸಿರುವುದಾಗಿ 20 ವರ್ಷದ ಮಹಿಳೆ ಗಂಡನ ವಿರುದ್ಧ ದೂರು ದಾಖಲಿಸಿದ್ದಾರೆ.
ಪರಿಶಿಷ್ಟ ಜಾತಿ(ಎಸ್‌ಸಿ)ಗೆ ಸೇರಿದ ಮಹಿಳೆ, ಪತಿ ತನ್ನನ್ನು ‘ಅಸ್ಪೃಶ್ಯಳು’ ಎಂದು ಕರೆದ ನಂತರ ಆತನೊಂದಿಗೆ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ತನ್ನ ಪತಿ ಥಳಿಸುತ್ತಿದ್ದ ಎಂದು ಆರೋಪಿಸಿದ್ದಾರೆ.
ದಂಪತಿಗಳು ಮೆಹ್ಸಾನಾ ಜಿಲ್ಲೆಯ ಜೋಟಾನಾ ತಾಲೂಕಿನವರಾಗಿದ್ದು, ಪ್ರಸ್ತುತ ಅಹಮದಾಬಾದ್ ನ ಮೆಮಗರ್ ನಲ್ಲಿ ನೆಲೆಸಿದ್ದಾರೆ. ಇಬ್ಬರೂ ಪ್ರೀತಿಸಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮದುವೆಯಾಗಿದ್ದಾರೆ.
ಮದುವೆಯಾದ ಆರಂಭದ ದಿನಗಳಲ್ಲಿ ಪತಿ ಚೆನ್ನಾಗಿಯೇ ನಡೆದುಕೊಳ್ಳುತ್ತಿದ್ದರು ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನಂತರ, ಸಣ್ಣ ವಿಷಯಗಳಿಗೆ ಅವನು ಅವಳೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದ ಎನ್ನಲಾಗಿದೆ.
ದರ್ಬಾರ್ ಸಮುದಾಯಕ್ಕೆ ಸೇರಿದ ತನ್ನ ಪತಿ ಪರಿಶಿಷ್ಟ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದಕ್ಕಾಗಿ ಅಲ್ಲಿನ ಜನರು ಅಪಹಾಸ್ಯ ಮಾಡಿದ್ದರಿಂದ ತಾನು ಇನ್ನು ಮುಂದೆ ತನ್ನ ಗ್ರಾಮಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.
ತನ್ನ ಅತ್ತೆ-ಮಾವಂದಿರು ನಗರಕ್ಕೆ ಬಂದಾಗಲೆಲ್ಲಾ ಎಸ್‌ಸಿ ಸಮುದಾಯದಿಂದ ಬಂದಿದ್ದಕ್ಕೆ ಅವಮಾನ ಮಾಡಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.
ತನ್ನ ಮಾವ, ಅತ್ತೆ ಮತ್ತು ಪತಿ ಕೂಡ ಜಾತಿ ಆಧಾರಿತ ನಿಂದನೆ ಮಾಡಿ ತನ್ನನ್ನು ಅವಮಾನಿಸಿದ್ದಾರೆ. ಗಂಡ ‘ಅಸ್ಪೃಶ್ಯಳು’ ಎಂದು ಕರೆದಿದ್ದರಿಂದ ಸುಮಾರು ಐದು ತಿಂಗಳ ಹಿಂದೆ ಮಹಿಳೆ ಲೈಂಗಿಕ ಕ್ರಿಯೆಗೆ ನಿರಾಕರಿಸಿದಾಗ, ಆಕೆಯ ಪತಿ ಆಕೆಗೆ ಥಳಿಸಿದ್ದಾನೆ. ಅನೇಕ ಬಾರಿ ಅತ್ಯಾಚಾರವೆಸಗಿದ್ದಾನೆ. ಆಕೆ ಪ್ರಜ್ಞಾಹೀನಳಾಗುವವರೆಗೂ ಪತಿ ಕಬ್ಬಿಣದ ಸಲಾಕೆಯಿಂದ ಥಳಿಸಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.
ಘಟನೆಯ ನಂತರ ಮಹಿಳೆ ಮೆಹ್ಸಾನಾದಲ್ಲಿರುವ ತನ್ನ ಪೋಷಕರ ಮನೆಗೆ ಹೋಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಳು. ಆಸ್ಪತ್ರೆಯಲ್ಲಿ ದಾಖಲಾದ ವೈದ್ಯಕೀಯ-ಕಾನೂನು ದೂರಿನ ಆಧಾರದ ಮೇಲೆ ಘಟ್ಲೋಡಿಯಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.