ಅಮೃತಸರ: ನಿನ್ನೆ ಇಟಲಿಯಿಂದ ಪಂಜಾಬ್ ಗೆ ಆಗಮಿಸಿದ್ದ ನೂರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದ ಬೆನ್ನಲ್ಲೇ ಇದೀಗ ಮತ್ತೆ ಇಟಲಿಯಿಂದ ಅಮೃತಸರಕ್ಕೆ ಆಗಮಿಸಿದ್ದ 150 ಪ್ರಯಾಣಿಕರಲ್ಲಿ ಕೋವಿಡ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ರೂಪಾಂತರಿ ವೈರಸ್ ಒಮಿಕ್ರಾನ್ ಭೀತಿ ಹೆಚ್ಚಿದೆ.
ರೋಮ್ ನಿಂದ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದ 290 ಪ್ರಯಾಣಿಕರ ಪೈಕಿ 150 ಪ್ರಯಾಣಿಕರಿಗೆ ಇದೀಗ ಕೊರೊನಾ ಪಾಸಿಟಿವ್ ಬಂದಿದ್ದು, ಎಲ್ಲಾ ಸೋಂಕಿತರನ್ನು ಕ್ವಾರಂಟೈನ್ ಮಾಡಿ ಚಿಕಿತ್ಸೆಗೊಳಪಡಿಸಲಾಗಿದೆ.
ಈಗಾಗಲೇ ಇಟಲಿಯನ್ನು ಹೈ ರಿಸ್ಕ್ ದೇಶ ಎಂದು ಪರಿಗಣಿಸಲಾಗಿದ್ದು, ನಿನ್ನೆ ಇಟಲಿಯಿಂದ ಅಮೃತಸರ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಗೆ ಬಂದಿಳಿದಿದ್ದ 125 ಪ್ರಯಾಣಿಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ 13 ಸೋಂಕಿತರು ವೈದ್ಯರು ಹಾಗೂ ಭದ್ರತಾ ಸಿಬ್ಬಂದಿಗಳ ಕಣ್ತಪ್ಪಿಸಿ ಆಸ್ಪತ್ರೆಯಿಂದಲೇ ಪರಾರಿಯಾಗಿ ಆತಂಕ ಮೂಡಿಸಿದ್ದಾರೆ.
ಇದರ ಬೆನ್ನಲ್ಲೇ ಅಮೃತಸರ ವಿಮಾನ ನಿಲ್ದಾಣಕ್ಕೆ ಇಂದು ಬಂದಿಳಿದ 150 ಜನರಲ್ಲಿ ಪ್ರಯಾಣಿಕರಲ್ಲಿ ಇದೀಗ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಪಂಜಾಬ್ ನಾದ್ಯಂತ ಕೋವಿಡ್ ಆತಂಕ ಮನೆಮಾಡಿದೆ.