ಚಿತ್ರದುರ್ಗ: ಕಾಂಗ್ರೆಸ್ ಪಾದಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಪ್ರಾಣಹೋದರೂ ಪಾದಯಾತ್ರೆ ಬಿಡಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿರುವ ಸಚಿವ ಗೋವಿಂದ ಕಾರಜೋಳ, ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ, ಅದಕ್ಕಾಗಿ ಪ್ರಾಣ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವ ಕಾರಜೋಳ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೀರಾವರಿ ಯೋಜನೆಗೆ ಏನೂ ಮಾಡದೇ ಗಡದ್ ಆಗಿ ನಿದ್ದೆಗೆ ಜಾರಿತ್ತು. ಈಗ ಎಚ್ಚೆತ್ತುಕೊಂಡು ಪಾದಯಾತ್ರೆ ನಾಟಕವಾಡುತ್ತಿದೆ. ಒಮಿಕ್ರಾನ್, ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಇಂತಹ ಸದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಹೋರಾಟ ನಡೆಸುವುದು ಸರಿಯಲ್ಲ ಎಂದರು.
ಮೇಕೆದಾಟು ಹೆಸರಲ್ಲಿ ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಗಿಮಿಕ್. ಇಂತಹ ಗಿಮಿಕ್ ನಿಂದ ಜನರ ಮನ ಗೆಲ್ಲಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವ ಕಾಂಗ್ರೆಸ್ ಇಲ್ಲಿ ಹೋರಾಟ ನಡೆಸಿದೆ. ಅಲ್ಲಿ ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರ ಕ್ಯಾತೆ ತೆಗೆದಿದೆ. ಮೊದಲು ವಿಪಕ್ಷ ನಾಯಕ ಸಿದ್ದರಾಮಯ್ಯ ತಮಿಳುನಾಡು ಸಿಎಂ ಸ್ಟ್ಯಾಲಿನ್ ಗೆ ಬುದ್ಧಿ ಹೇಳಲಿ. ಅದನ್ನು ಬಿಟ್ಟು ಪಾದಯಾತ್ರೆ ಹೆಸರಲ್ಲಿ ಜನರಿಗೆ ಭ್ರಮೆ ಹುಟ್ಟಿಸುವುದು ಬೇಡ ಎಂದು ವಾಗ್ದಾಳಿ ನಡೆಸಿದರು.