ನವದೆಹಲಿ : ವ್ಯಕ್ತಿಯೊಬ್ಬರಿಗೆ ಹೃದಯ ಕಸಿ ಮಾಡುವುದಕ್ಕಾಗಿ 12 ಕಿ.ಮೀ ದೂರದಲ್ಲಿದ್ದ ಹೃದಯವನ್ನು ಕೇವಲ 11 ನಿಮಿಷಗಳಲ್ಲಿ ತಲುಪಿಸಿದ ಪೊಲೀಸರು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೃತ ವ್ಯಕ್ತಿಯೊಬ್ಬರ ಜೀವಂತ ಹೃದಯವನ್ನು ಚಂಡೀಗಢದಿಂದ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಅದನ್ನು ಏಮ್ಸ್ ಆಸ್ಪತ್ರೆಗೆ ಸಾಗಿಸಬೇಕಿತ್ತು. ಇದರ ಮಧ್ಯೆ ಇರುವ ದೂರ 12 ಕಿ.ಮೀ ಆಗಿತ್ತು. ಆದರೆ, ನಗರದ ಸಂಚಾರ ಪೊಲೀಸರು ಕೇವಲ 11 ನಿಮಿಷಗಳಲ್ಲಿ ಈ ಹೃದಯವನ್ನು ತಲುಪಿಸಿ ಜನರ ಮೆಚ್ಚುಗೆ ಗಳಿಸುತ್ತಿದ್ದಾರೆ.
ಇಂಡಿಗೋ ವಿಮಾನದ ಮೂಲಕ ಚಂಡೀಗಢದಿಂದ ನಿನ್ನೆಯೇ ದೆಹಲಿ ವಿಮಾನ ನಿಲ್ದಾಣಕ್ಕೆ ಜೀವಂತ ಹೃದಯ ತರಲಾಗಿತ್ತು. ಈ ಹೃದಯವನ್ನು ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾದ ರೋಗಿಯೊಬ್ಬರಿಗೆ ಕಸಿ ಮಾಡಬೇಕಿತ್ತು.
ಇದನ್ನು ತರುವುದಕ್ಕಾಗಿ ಏಮ್ಸ್ ನ ಮುಖ್ಯಸ್ಥರೊಬ್ಬರು ಪೊಲೀಸರಿಗೆ ಮನವಿ ಮಾಡಿದ್ದರು. ಗ್ರೀನ್ ಕಾರಿಡಾರ್ ವ್ಯವ್ಯಸ್ಥೆಯ ಮೂಲಕ ಪೊಲೀಸರು ಕೇವಲ 11 ನಿಮಿಷಗಳಲ್ಲಿ ಏಮ್ಸ್ ಆಸ್ಪತ್ರೆಗೆ ಈ ಹೃದಯ ತಲುಪಿಸಿದ್ದಾರೆ.
ಆಂಬುಲೆನ್ಸ್ ಮೂಲಕ ವಿಮಾನ ನಿಲ್ದಾಣದಿಂದ 2.19ಕ್ಕೆ ಹೊರಟಿದ್ದ ಹೃದಯ, 2.30ಕ್ಕೆ ಏಮ್ಸ್ ಆಸ್ಪತ್ರೆ ತಲುಪಿತ್ತು. ಇದಕ್ಕೆ ಪೊಲೀಸರ ಸಹಕಾರವೇ ಹೆಚ್ಚಾಗಿತ್ತು. ಸರಿಯಾದ ಸಮಯಕ್ಕೆ ಹೃದಯ ಸಾಗಿಸಿದ್ದಕ್ಕೆ ಏಮ್ಸ್ ಆಡಳಿತ ಮಂಡಳಿ, ಸಿಬ್ಬಂದಿ ಸೇರಿದಂತೆ ದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.