ದಂಪತಿಗೆ ವಿಚ್ಚೇದನವನ್ನು ನೀಡಿದ ದೆಹಲಿ ಹೈಕೋರ್ಟ್, ಪತಿ ತನ್ನ ಪತ್ನಿಯನ್ನು ತಾತ್ಕಾಲಿಕ ಸಂಗಾತಿಯಾಗಿ ಬಳಸಿಕೊಂಡ ಸಂದರ್ಭದಲ್ಲಿ ಅಂತಹ ವೈವಾಹಿಕ ಸಂಬಂಧವನ್ನು ಸರಿಪಡಿಸಲು ಸಾಧ್ಯವಿಲ್ಲ. ಕಾನೂನುಬದ್ಧವಾಗಿ ಮಾತ್ರ ಪತಿ – ಪತ್ನಿ ಎಂಬ ಸಂಬಂಧ ಉಳಿದಿದ್ದರೆ ಅವರು ಸಂಪೂರ್ಣ ಜೀವನದಿಂದ ವಂಚಿತರಾಗುತ್ತಾರೆ. ಹೀಗಾಗಿ ಇಂತಹ ಸಂಬಂಧಗಳು ಮುಂದುವರಿದರೆ ಮಾನಸಿಕವಾಗಿ ಹಿಂಸೆಯಾಗುತ್ತದೆ ಎಂದು ಹೇಳುವ ಮೂಲಕ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆಯ ಮನವಿಯನ್ನು ಪುರಸ್ಕರಿಸಿದೆ.
ವಿಚ್ಚೇದನ ನೀಡಲು ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ವಿಪಿನ್ ಸಿಂಘಿ ಹಾಗೂ ಜಸ್ಮಿತ್ ಸಿಂಗ್ ಅವರ ಪೀಠವು ವಿಚ್ಚೇದನವನ್ನು ಕೊಡಿಸುವ ಮೂಲಕ ಇಬ್ಬರಿಗೂ ಹೊಸ ಜೀವನ ಪ್ರಾರಂಭಿಸಿ ಎಂದು ಹೇಳಿದ್ದಾರೆ.
ಹೈಕೋರ್ಟ್ನ ಪ್ರಕಾರ, ಮದುವೆ ಎಂದರೆ ಇಬ್ಬರ ಜೀವನದ ನಡುವಿನ ಪ್ರಯಾಣವಾಗಿದೆ. ಇದು ಎರಡು ಆತ್ಮಗಳನ್ನು ಒಂದುಗೂಡಿಸುತ್ತದೆ. ಮದುವೆ ಸಂಬಂಧದಲ್ಲಿ ಇರುವವರು ತಮ್ಮ ಅನುಭವಗಳನ್ನು, ಸುಖ ಸಂತೋಷಗಳನ್ನು, ದುಃಖ ಕಷ್ಟಗಳನ್ನು ಹಂಚಿಕೊಳ್ಳುತ್ತಾರೆ. ಈ ಸಂಬಂಧದಲ್ಲಿ ಎರಡು ಜೀವಗಳು ಶಾಶ್ವತವಾದ ನೆನಪುಗಳನ್ನು ಒಗ್ಗೂಡಿಸುತ್ತವೆ. ಹಾಗೂ ಉತ್ತಮ ಭವಿಷ್ಯಕ್ಕಾಗಿ ಸಹಬಾಳ್ವೆ ನಡೆಸುತ್ತಾರೆ.
ಆದರೆ ಈ ಪ್ರಕರಣದಲ್ಲಿ ಮದುವೆ ಬಳಿಕ ದಂಪತಿ ಒಂದಾಗಿ ವಾಸಿಸುತ್ತಿಲ್ಲ. ಪತಿಯು ತನ್ನ ಪತ್ನಿಯನ್ನು ತಾತ್ಕಾಲಿಕ ಸಂಗಾತಿಯಾಗಿ ಬಳಸಿಕೊಂಡಿದ್ದಾನೆ. ವಿದ್ಯಾವಂತೆಯಾದ ಪತ್ನಿಯು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪತಿ ಕೆನಡಾದಲ್ಲಿದ್ದಾಗ ಇವರು ಕೆಲವು ದಿನಗಳ ಒಟ್ಟಿಗೆ ಇದ್ದರು. ಇದಾದ ಬಳಿಕ 11 ವರ್ಷದ ದಾಂಪತ್ಯ ಜೀವನದಲ್ಲಿ ಪತಿಯು ಪತ್ನಿಯನ್ನು ಸರಿಯಾಗಿ ನೋಡಿಕೊಂಡಿಲ್ಲ. ಗಂಡನ ನಡವಳಿಕೆಯಿಂದ ಆತನಿಗೆ ಈ ಸಂಬಂಧದಲ್ಲಿ ಆಸಕ್ತಿ ಇಲ್ಲ ಎಂಬುದು ತಿಳಿಯುತ್ತದೆ. ಪತಿಯ ಈ ವರ್ತನೆಗಳು ಪತ್ನಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಈ ವಿಚ್ಚೇದನ ನೀಡಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ.