ಇಟಲಿಯಿಂದ ಪಂಜಾಬ್ ನ ಅಮೃತಸರಕ್ಕೆ ಬಂದಿಳಿದಿದ್ದ ಏರ್ ಇಂಡಿಯಾ ವಿಮಾನದಲ್ಲಿದ್ದ 125 ಮಂದಿ ಪ್ರಯಾಣಿಕರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವಿಮಾನದಲ್ಲಿ ಸಿಬ್ಬಂದಿ ಸೇರಿದಂತೆ 179 ಮಂದಿ ಇದ್ದರೆನ್ನಲಾಗಿದ್ದು, ಸೋಂಕಿಗೊಳಗಾದ 125 ಮಂದಿಯನ್ನು ಕ್ವಾರಂಟೈನ್ ಗೊಳಪಡಿಸಲಾಗಿದೆ.
ಆದರೆ ಒಂದೇ ವಿಮಾನದಲ್ಲಿದ್ದ 125 ಮಂದಿ ಪ್ರಯಾಣಿಕರಿಗೆ ಕೊರೊನಾ ಸೋಂಕು ತಗುಲಿರುವುದು ಅಚ್ಚರಿಗೆ ಕಾರಣವಾಗಿದೆ. ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಆರ್ ಟಿ ಪಿಸಿಆರ್ ಟೆಸ್ಟ್ ಕಡ್ಡಾಯವಾಗಿದ್ದು, ವಿಮಾನ ಏರುವ ಮುನ್ನವೂ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತದೆ. ಇಷ್ಟೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ ಅದು ಹೇಗೆ ಇಷ್ಟು ಮಂದಿಗೆ ಕೊರೊನಾ ತಗುಲಿದೆ ಎಂಬುದು ಗೊಂದಲಕ್ಕೆ ಕಾರಣವಾಗಿದೆ.
ಒಂದೊಮ್ಮೆ ಪ್ರಯಾಣಿಕರ ಪೈಕಿ ಯಾರಿಗಾದರೂ ಸೋಂಕು ಕಡೆಕ್ಷಣದಲ್ಲಿ ತಗುಲಿ ಅದು ಇಷ್ಟೊಂದು ಮಂದಿಗೆ ವ್ಯಾಪಿಸಲು ಕಾರಣವಾಯ್ತಾ ಎಂಬ ಪ್ರಶ್ನೆಯೂ ಮೂಡಿದೆ. ಹಾಗಾಗಿದ್ದ ಪಕ್ಷದಲ್ಲಿ ಕೊರೊನಾ ಅಷ್ಟೊಂದು ತೀವ್ರವಾಗಿ ಹರಡುತ್ತದೆಯಾ ಎಂಬ ಹಲವು ಅನುಮಾನಗಳನ್ನೂ ಹುಟ್ಟು ಹಾಕಿದೆ.