ಮೈಸೂರು: ಮತಾಂತರಕ್ಕೆ ಒತ್ತಾಯಿಸಿ ತಮ್ಮನೇ ಅಣ್ಣನ ಕುಟುಂಬಕ್ಕೆ ನಿತ್ಯವೂ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ತಮ್ಮ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲವೆಂದು ಹೆಚ್.ಡಿ. ಕೋಟೆ ತಾಲೂಕಿನ ಟೈಗರ್ ಬ್ಲಾಕ್ ನಿವಾಸಿ ಕೆ. ಯದುನಂದನ್ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನನ್ನ ತಮ್ಮ ಮನೋಹರ ನಮಗೂ ಮತಾಂತರ ಆಗುವಂತೆ ಬಲವಂತ ಮಾಡುತ್ತಿದ್ದ. ಆಮಿಷ ತೋರಿಸುತ್ತಿದ್ದ. ಇದಕ್ಕೆ ಒಪ್ಪದಿದ್ದಾಗ ಕಿರುಕುಳ ನೀಡಿದ್ದಾನೆ ಎಂದು ದೂರಿದ್ದಾರೆ.
ಮತಾಂತರಕ್ಕೆ ಒಪ್ಪದಿದ್ದಾಗ ನಾಲ್ಕು ಜನ ಸಹಚರರೊಂದಿಗೆ ಬಂದು ನನ್ನ ಮೇಲೆ, ನನ್ನ ಪತ್ನಿಯ ಮೇಲೆ ಹಲ್ಲೆ ಮಾಡಿ, ಬಟ್ಟೆ ಹರಿದು, ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಹಲ್ಲೆಗೊಳಗಾದ ನನ್ನ ಎಡಗೈ ಮುರಿದಿದೆ. ಪತ್ನಿಯ ಕಾಲಿಗೆ ಪೆಟ್ಟಾಗಿದೆ. ಪೊಲೀಸರು ದೂರು ನೀಡಿದರೆ ಕ್ರಮಕೈಗೊಳ್ಳದೇ ಸೋದರರ ಜಗಳ, ರಾಜೀ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಹೆಚ್.ಡಿ. ಕೋಟೆ ಠಾಣೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.