ಈಗ ಏರಿಕೆಯಾಗ್ತಿರೊ ಕೊರೋನಾ ಪ್ರಕರಣಗಳು ಮುಂದಿನ ಕೆಲವು ವಾರಗಳಲ್ಲೆ ಇಳಿಕೆ ಕಾಣಬಹುದು ಎಂದು ಏಮ್ಸ್ ನ ನರರೋಗ ತಜ್ಞ ಪಿ ಎಸ್ ಚಂದ್ರ ಭವಿಷ್ಯ ನುಡಿದಿದ್ದಾರೆ. ಹಾಗಂತ ನಾವು ಮೈಮರೆಯಬಾರದು, ಕೆಟ್ಟ ಪರಿಸ್ಥಿತಿಗೆ ತಯಾರಾಗುವುದರ ಜೊತೆಗೆ ಈ ಪರಿಸ್ಥಿತಿ ಹೀಗೆ ಇರುವುದಿಲ್ಲ ಎಂಬುದನ್ನ ನೆನಪಿನಲ್ಲಿಟ್ಟಕೊಳ್ಳಬೇಕು ಎಂದಿದ್ದಾರೆ.
ನಾವು ಕೆಲವು ವಾರಗಳಲ್ಲೆ ಕೊರೋನಾ ಕಡಿಮೆಯಾಗುತ್ತದೆ ಎಂದು ಹೇಳುವುದಕ್ಕು ಕಾರಣವಿದೆ, ಒಮಿಕ್ರಾನ್ ಶುರುವಾದ ಆಫ್ರಿಕಾ ಹಾಗೂ ಸೌತ್ ಆಫ್ರಿಕಾ ದೇಶಗಳನ್ನ ನೋಡಿ. ಶುರುವಿನಲ್ಲಿ ಪರಿಸ್ಥಿತಿ ಹೇಗಿತ್ತು, ಈಗ ಕಡಿಮೆ ಪ್ರಕರಣಗಳು ವರದಿಯಾಗುತ್ತಿವೆ. ಭಾರತದಲ್ಲೂ ಹೀಗೆ ಆಗುತ್ತದೆ ಗರಿಷ್ಠ ಸಂಖ್ಯೆಗೆ ಏರುವ ಪ್ರಕರಣಗಳು ನಂತರ ಇಳಿಕೆ ಕಾಣುತ್ತವೆ. ಆದರೆ ಈ ವೇಳೆ ನಮ್ಮನ್ನ ನಾವೇ ಸುರಕ್ಷಿತವಾಗಿಟ್ಟುಕೊಳ್ಳಬೇಕು. ಮಾಸ್ಕ್ ಹಾಕುವುದನ್ನ ಮರೆಯಬಾರದು. ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿ, ಮನೆಯಿಂದಲೇ ಕೆಲಸ ಮಾಡುವ ಅವಕಾಶವಿದ್ದರೆ ಮನೆಯಿಂದಲೇ ಕಾರ್ಯ ನಿರ್ವಹಿಸಿ. ಜನಸಂದಣಿಯಿಂದ ದೂರವಿರಿ ಎಂದು ಪಿ.ಎಸ್. ಚಂದ್ರ ತಿಳಿಸಿದ್ದಾರೆ.
ಒಮಿಕ್ರಾನ್ ವೇಗವಾಗಿ ಹರಡುತ್ತಿದೆಯಾದರೂ ಇದರಿಂದ ಇಮ್ಯೂನ್ ಸಿಸ್ಟಮ್ ಗೆ ಯಾವುದೇ ತೊಂದರೆಯಿಲ್ಲ. ಸಾಕಷ್ಟು ಸೋಂಕಿತರಲ್ಲಿ ರೋಗಲಕ್ಷಣಗಳೆ ಇಲ್ಲ. ಇದು ಒಳ್ಳೆ ಸಂಕೇತ, ಆದರೆ ಒಮಿಕ್ರಾನ್ ವೇಗವಾಗಿ ಹರಡುತ್ತದೆ ಎನ್ನುವುದನ್ನ ನಾವು ಮರೆಯಬಾರದು. ಒಮಿಕ್ರಾನ್ ಗುಣಲಕ್ಷಣಗಳು ಸೌಮ್ಯವಾಗಿರುವುದರಿಂದ ಸೋಂಕಿತರಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಆದರೆ ಭಾರತದ ಜನಸಂಖ್ಯೆ ಜಾಸ್ತಿ ಇರುವುದರಿಂದ ಒಂದು ಪ್ರತಿಶತದಷ್ಟು ಸೋಂಕಿತರಿಗೆ ಆಸ್ಪತ್ರೆ ಚಿಕಿತ್ಸೆಯ ಅಗತ್ಯ ಬಿದ್ದರೆ ಪರಿಸ್ಥಿತಿ ಬಿಗಡಾಯಿಸಬಹುದು ಎಂದು ಚಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಮುಖ್ಯವಾಗಿ ವೈದ್ಯಕೀಯ ಸಿಬ್ಬಂದಿ ಆರೋಗ್ಯವಾಗಿರುವುದು ಮುಖ್ಯವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಏನಾದರು ಅವರಿಗೆ ಸೋಂಕು ತಗುಲಿದರೆ ಅತಿಕೆಟ್ಟ ಪರಿಸ್ಥಿತಿ ಸೃಷ್ಟಿಯಾಗೋದು ಗ್ಯಾರಂಟಿ, ಆರೋಗ್ಯ ಸಿಬ್ಬಂದಿ ಆರೋಗ್ಯವಾಗಿದ್ದರೆ ಮಾತ್ರ ಸೋಂಕಿತರನ್ನ ನೋಡಿಕೊಳ್ಳಲು ಸಾಧ್ಯ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂಬುದು ಪಿ.ಎಸ್. ಚಂದ್ರ ಅವರ ಅಭಿಪ್ರಾಯ.