ರಾಷ್ಟ್ರ ರಾಜಧಾನಿ ದೆಹಲಿಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ, ವೈದ್ಯರು, ನರ್ಸ್ ಗಳು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಸುಮಾರು ನೂರು ಜನರಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಹೇಳಲಾಗ್ತಿದೆ. ದೆಹಲಿಯಲ್ಲಿ ಈ ಸರ್ಕಾರಿ ಆಸ್ಪತ್ರೆಗಳಲ್ಲೆ ಹೆಚ್ಚಾಗಿ ಕೊರೋನಾಗೆ ಚಿಕಿತ್ಸೆ ನೀಡುವುದು, ಅದ್ರಲ್ಲು ಕೋವಿಡ್ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಸಿಬ್ಬಂದಿಗೆ ಸೋಂಕು ತಗುಲಿರುವುದರಿಂದ ಸಿಬ್ಬಂದಿಯ ಕೊರತೆ ಉಂಟಾಗಬಹುದು. ಇಂದಿನ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಒಪ್ಪಿಕೊಂಡಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲಿರುವುದು ಸತ್ಯ ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದಾರೆ.
ಆದರೂ ದೆಹಲಿಯಲ್ಲಿ ಪರಿಸ್ಥಿತಿ ಆತಂಕಕಾರಿಯಾಗ್ತಿದೆ. ದೆಹಲಿಯ ಎಲ್ಎನ್ಪಿಜಿ ಆಸ್ಪತ್ರೆಯಲ್ಲಿ 20 ಜನ ಸಿಬ್ಬಂದಿಗೆ ಸೋಂಕು ತಗುಲಿದೆ. ಈ ವಿಷಯವನ್ನು ದೃಢಪಡಿಸಿರುವ ಎಲ್ಎನ್ಪಿಜಿ ಮುಖ್ಯ ವೈದ್ಯ ನಿರ್ದೇಶಕ ಡಾ ಸುರೇಶ್ ಕುಮಾರ್, ಹನ್ನೊಂದು ವೈದ್ಯರು, 9 ನರ್ಸ್ ಗಳು ಸೋಂಕಿಗೆ ತುತ್ತಾಗಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು ಆರೋಗ್ಯ ಕಾರ್ಯಕರ್ತರೆ ಸೋಂಕಿಗೆ ತುತ್ತಾದರೆ ಜನರಿಗೆ ಚಿಕಿತ್ಸೆ ನೀಡುವವರು ಯಾರು ಎಂದಿದ್ದಾರೆ. ಮುಂದೆ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು, ಹೀಗಾಗಿ ನಾವು 25% ಹೆಚ್ಚು ಸಿಬ್ಬಂದಿಯನ್ನ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಉತ್ತರ ದೆಹಲಿಯ ಹಿಂದೂರಾವ್ ಆಸ್ಪತ್ರೆಯಲ್ಲು 20ಕ್ಕಿಂತ ಹೆಚ್ಚು ವೈದ್ಯಕೀಯ ಸಿಬ್ಬಂದಿಗಳಲ್ಲಿ ಕೊರೋನಾ ಪತ್ತೆಯಾಗಿದೆ ಎಂದು ಹೇಳಲಾಗ್ತಿದೆ. ಇನ್ನೊಂದೆಡೆ ಸಫ್ದರ್ಜುಂಗ್ ಆಸ್ಪತ್ರೆಯ ವೈದ್ಯರೊಬ್ಬರು ನಮ್ಮ ಆಸ್ಪತ್ರೆಯಲ್ಲಿ 50ಕ್ಕಿಂತ ಹೆಚ್ಚು ಕೇಸ್ ಗಳು ಇರಬಹುದು ಎಂದು ಹೇಳಿದ್ದಾರೆ. ಏಮ್ಸ್ ಆಸ್ಪತ್ರೆಯ ಐವತ್ತಕ್ಕು ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ತಗುಲಿದೆ ಎಂದು ಹೇಳಲಾಗ್ತಿದೆ.
ಕಳೆದ ವಾರದಿಂದ ನಾವು ನಮ್ಮ 300 ಸಿಬ್ಬಂದಿಗಳನ್ನ ಟೆಸ್ಟ್ ಗೆ ಒಳಪಡಿಸಿದ್ದೇವೆ ಅದರಲ್ಲಿ 10 ರಿಂದ 15 ಪ್ರತಿಶತದಷ್ಟು ಸೋಂಕು ದೃಢವಾಗುತ್ತಿದೆ ಎಂದು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ ನಂದಿನಿ ದುಗ್ಗಲ್ ತಿಳಿಸಿದ್ದಾರೆ. ನೆನ್ನೆ ಭಾರತೀಯ ವೈದ್ಯಕೀಯ ಸಂಘವು, ವೈದ್ಯರ ಕೆಲಸ ಮಾಡುವ ವೇಳೆಯನ್ನ ಕಡಿಮೆ ಮಾಡಿ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.