ಎಟಿಎಂ ಮೆಷಿನ್‌ಗಳ ತಯಾರಕರಾದ ಎನ್‌ಸಿಆರ್ ಕಾರ್ಪೊರೇಷನ್, ಎಟಿಎಂ ಗಳಲ್ಲೂ ಕಾರ್ಡ್‌ಲೆಸ್ ಸೇವೆ ನೀಡುವ ತಂತ್ರಜ್ಞಾನವನ್ನ ಪ್ರಾರಂಭಿಸಿದೆ. ಯುಪಿಐ(UPI) ಅನ್ನು ಆಧರಿಸಿ ಇಂಟರ್ ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ವಿಥ್ ಡ್ರಾವಲ್(ICCW) ಸೇವೆಯನ್ನ ಶುರುಮಾಡಿದೆ.
ನಿಮ್ಮ ಬಳಿ ಕಾರ್ಡ್ ಇಲ್ಲದಿದ್ದರೂ ನೀವು ಎಟಿಎಂಗೆ ಹೋಗಿ ನಿಮ್ಮ ಫೋನಿನ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಡೆದುಕೊಳ್ಳಬಹುದು. ಈ ಹೊಸ ಸೌಲಭ್ಯವನ್ನು ಸ್ಥಾಪಿಸಲು ಸಿಟಿ ಯೂನಿಯನ್ ಬ್ಯಾಂಕ್ ಎನ್‌ಸಿಆರ್‌ನೊಂದಿಗೆ ಕೈಜೋಡಿಸಿದ್ದು, ಬ್ಯಾಂಕ್ ಈಗಾಗಲೇ ತನ್ನ 1,500 ATM ಗಳನ್ನು ನವೀಕರಿಸಿದೆ. ಇದು ಬ್ಯಾಂಕಿಂಗ್ ನಲ್ಲಿ ದೊಡ್ಡ ಹೆಜ್ಜೆ, ಕಾರ್ಡ್ ಇಲ್ಲದಿದ್ದರೂ ಮೊಬೈಲ್ ಫೋನ್ ನಿಂದಲೆ ಎಟಿಎಂ ನಲ್ಲಿ ಹಣ ವಿಥ್ ಡ್ರಾ ಮಾಡಬಹುದು ಎಂದು ಎನ್ಸಿಆರ್ ಕಾರ್ಪೋರೇಷನ್ ನ ನಿರ್ದೇಶಕ ನವ್ರೋಜ್ ದಸ್ತೂರ್ ತಿಳಿಸಿದ್ದಾರೆ.
ICCW ಹೇಗೆ ಕೆಲಸ ನಿರ್ವಹಿಸುತ್ತದೆ
ಯುಪಿಐನಿಂದ ಚಾಲಿತವಾಗಿರುವ ಅಥವಾ ಸಕ್ರಿಯವಾಗಿರುವ ಯಾವುದೇ ಆ್ಯಪ್ ಬಳಸಿ ಎಟಿಎಂ ನಿಂದ ಹಣ ವಿಥ್ ಡ್ರಾ ಮಾಡಲು ಈ ಹೊಸ ಸೌಲಭ್ಯ ಸಹಾಯಕವಾಗಿದೆ. ಯುಪಿಐ ಸಕ್ರಿಯಗೊಳಿಸಲಾದ ಎಟಿಎಂಗಳಿಗೆ ಭೇಟಿ ನೀಡುವಾಗ ಕಾರ್ಡ್ ಅನ್ನು ಸ್ವೈಪ್ ಮಾಡುವ ಅಥವಾ ಒಯ್ಯುವ ಅಗತ್ಯವಿಲ್ಲ.
ಬಳಕೆದಾರರು ಎಟಿಎಂ ಪರದೆಯ ಮೇಲೆ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಅವರ ಫೋನ್ ಗಳ ಮೂಲಕವೇ ನಗದು ಪಡೆಯಬಹುದು. ವಹಿವಾಟುಗಳನ್ನು ಹೆಚ್ಚು ಸುರಕ್ಷಿತವಾಗಿರಿಸಲು QR ಕೋಡ್ ಅನ್ನು ನಿರಂತರವಾಗಿ ಬದಲಾಯಿಸಲಾಗುತ್ತದೆ.
ಪ್ರಸ್ತುತ, ಹಣ ಪಡೆಯುವ ಮಿತಿಯನ್ನು 5,000 ಕ್ಕೆ ಮಿತಿಗೊಳಿಸಲಾಗಿದೆ. ಯುಪಿಐ ಆಧಾರಿತವಾಗಿರುವುದರಿಂದ ಇದಕ್ಕೆ ಯಾವುದೇ ಹೆಚ್ಚುವರಿ ನಿಯಂತ್ರಣವಾಗಲಿ, ಅನುಮತಿಯ ಅಗತ್ಯವಿಲ್ಲ ಎಂದು ದಸ್ತೂರ್ ತಿಳಿಸಿದ್ದಾರೆ.
ನಾವು ಏನು ಮಾಡಿದ್ದೇವೆ ಎಂದರೆ ಸಿಟಿ ಯೂನಿಯನ್ ಬ್ಯಾಂಕ್‌ನ ಅಸ್ತಿತ್ವದಲ್ಲಿರುವ ಎಟಿಎಂಗಳಲ್ಲಿ ವಹಿವಾಟಿನ ಈ ವಿಧಾನವನ್ನು ಅನುಸರಿಸಲು, ಅಸ್ತಿತ್ವದಲ್ಲಿರುವ ಸಾಫ್ಟ್‌ವೇರ್ ಅನ್ನು ನವೀಕರಿಸಿದ್ದೇವೆ. ಯಾವುದೇ ಹಾರ್ಡ್‌ವೇರ್ ಅಪ್‌ಗ್ರೇಡ್ ಅಥವಾ ಬದಲಾವಣೆ ಮಾಡಿಲ್ಲ ಎಂದಿದ್ದಾರೆ ದಸ್ತೂರ್.
ICCW ಎಷ್ಟು ಸುರಕ್ಷಿತ..?
ಭದ್ರತಾ ದೃಷ್ಟಿಕೋನದಿಂದ, ಇದು ಇನ್ನೂ ಹೆಚ್ಚು ಸುರಕ್ಷಿತವಾಗಿದೆ. ಏಕೆಂದರೆ ಕಾರ್ಡ್ ಅನ್ನು ಒಯ್ಯುವ ಅಥವಾ ಸ್ವೈಪ್ ಮಾಡುವ ಅಗತ್ಯವಿಲ್ಲದಿರುವುದರಿಂದ, ನಿಮ್ಮ ಕಾರ್ಡ್ ಅನ್ನು ಒಂದಕ್ಕೆ ಸ್ಕಿಮ್ ಮಾಡಲು ಯಾವುದೇ ಮಾರ್ಗವಿಲ್ಲ.
ಎರಡನೆಯದಾಗಿ, ಈ ಪ್ರಕ್ರಿಯೆ ಡೈನಾಮಿಕ್ ಕ್ಯೂಆರ್ ಕೋಡ್ ಅನ್ನ ಆಧರಿಸಿರುವುದರಿಂದ, ಕ್ಯೂಆರ್ ಕೋಡ್ ಅನ್ನು ನಕಲಿಸಲು ಸಾಧ್ಯವಿಲ್ಲ. ಪ್ರತಿ ವಹಿವಾಟಿನ ನಂತರ ಕೋಡ್ ಬದಲಾಗುತ್ತದೆ, ಆದ್ದರಿಂದ ಇದನ್ನು ಡೈನಾಮಿಕ್ ಕ್ಯೂಆರ್ ಕೋಡ್ ಎಂದು ಕರೆಯಲಾಗುತ್ತದೆ ಎಂದು ದಸ್ತೂರ್ ವಿವರಿಸಿದ್ದಾರೆ.
ಭವಿಷ್ಯದ ಯೋಜನೆಗಳ ಕುರಿತು, ಎನ್‌ಸಿಆರ್ ಮತ್ತು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಕೆಲವು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳೊಂದಿಗೆ ಅಂತಿಮ ಹಂತದ ಚರ್ಚೆಯಲ್ಲಿದೆ. ಶೀಘ್ರದಲ್ಲೇ ಅವರೊಂದಿಗೆ ಔಪಚಾರಿಕ ಸಭೆ ನಡೆಸಿ ಪ್ರಕಟಿಸಲಾಗುವುದು ಎಂದು ದಸ್ತೂರ್ ಹೇಳಿದರು.