ತುಮಕೂರು: ಕಾನೂನು, ಸಂಸದೀಯ ಸಚಿವ ಮಾಧುಸ್ವಾಮಿ ದಕ್ಷಿಣ ಆಫ್ರಿಕಾ ಕಿಂಗ್ ಪಿನ್, ನಮ್ಮ ಜಿಲ್ಲೆಯನ್ನೇ ಹಾಳು ಮಾಡಿದ್ದಾನೆ ಎಂದು ಸಂಸದ ಜಿ.ಎಸ್.ಬಸವರಾಜ್, ಸಚಿವ ಬೈರತಿ ಬಸವರಾಜ್ ಅವರ ಬಳಿ ಅಸಮಾಧಾನ ವ್ಯಕ್ತಪಡಿಸಿದ ಸಂಭಾಷಣೆ ಬಹಿರಂಗವಾಗಿದೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿಗೂ ಮುನ್ನ ಸಂಸದ ಜಿ.ಎಸ್.ಬಸವರಾಜ್ ಹಾಗೂ ಸಚಿವ ಬೈರತಿ ಬಸವರಾಜ್ ಇಬ್ಬರೂ ಪರಸ್ಪರ ಮಾತನಾಡಿಕೊಳ್ಳುತ್ತಿದ್ದ ಗುಸು ಗುಸು ಸಂಭಾಷಣೆ ಇದೀಗ ವೈರಲ್ ಆಗಿದ್ದು, ಸ್ವಪಕ್ಷಿಯ ಸಚಿವರ ವಿರುದ್ಧ ಸಂಸದರೊಬ್ಬರು ಹರಿಹಾಯ್ದಿರುವುದು ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆಗೆ ಮತ್ತೆ ಪುಷ್ಠಿ ನೀಡಿದೆ.
ಸಚಿವ ಬೈರತಿ ಬಸವರಾಜ್ ಬಳಿ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಜಿ.ಎಸ್.ಬಸವರಾಜ್, ಸಚಿವ ಮಾಧುಸ್ವಾಮಿಯವರನ್ನು ಹಿಗ್ಗಮುಗ್ಗಾ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ. ನನ್ ಮಗ ನಮ್ಮ ಇಡೀ ಜಿಲ್ಲೆ ಹಾಳು ಮಾಡಿದ್ದಾನೆ… ಹೀಗಾದ್ರೆ ಒಂದ್ ಸೀಟ್ ಬರಲ್ಲ. ಮಾತು ಎತ್ತಿದರೆ ಹೊಡಿ ಬಡಿ ಕಡಿ ಅಂತಾನೆ. ಅವನ್ಯಾರೋ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೆ ಹೇಳ್ತಾನೆ ಹೆಂಡತಿ ಸೀರೆ ಒಗೆಯಲು ಲಾಯಕ್ ಅಂತಾ…ಅವನ್ಯಾರೋ ನಮ್ಮ ತಾಲೂಕಿಗೆ ಕರೆದುಕೊಂಡು ಬಂದ ಅವನು ಬರುವಾಗಲೇ ಒಂದು ಸಾವಿರ ಕೋಟಿ ಡಿಕ್ಲೇರ್ ಮಾಡಿಕೊಂಡು ಬಂದ. ಆತ ನಮ್ಮನ್ನು ಮಾತನಾಡಿಸಲೂ ಇಲ್ಲ…ಎಂದು ಕಿಡಿಕಾರಿದ್ದಾರೆ. ಈ ವೇಳೆ ಸಚಿವ ಬೈರತಿ ಬಸವರಾಜ್, ಸಂಸದರನ್ನು ಸುಮ್ಮನಿರಿ ಈ ಬಗ್ಗೆ ಆಮೇಲೆ ಮಾತನಾಡೋಣ ಎಂದು ಸೂಚಿಸುತ್ತಾರೆ.
ಒಟ್ಟಾರೆ ಸಚಿವ ಮಾಧುಸ್ವಾಮಿ ವಿರುದ್ಧ ಸಂಸದ ಜಿ.ಎಸ್.ಬಸವರಾಜ್ ಬೈದಿರುವ ವಿಡಿಯೋ-ಆಡಿಯೋ ಭಾರಿ ವೈರಲ್ ಆಗಿದ್ದು, ರಾಜ್ಯ ಬಿಜೆಪಿಯಲ್ಲಿ ಹೊಸ ತಲೆನೋವು ಹುಟ್ಟುಹಾಕಿದೆ.