ಪ್ರಧಾನಿ ಮೋದಿ ಪಂಜಾಬ್ ಗೆ ತೆರಳಿದ್ದ ವೇಳೆ ಉಂಟಾಗಿದ್ದ ಭದ್ರಾತಾ ಲೋಪದ ಬಗ್ಗೆ ಕಿಡಿಕಾರಿರುವ ಬಾಲಿವುಡ್ ನಟಿ ಕಂಗನಾ ರಾಣಾವತ್, ಇದು ಪ್ರಜಾತಂತ್ರದ ಮೇಲೆ ನಡೆದ ದಾಳಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಪಂಜಾಬ್ ಗೆ ತೆರಳಿದ್ದ ಪ್ರಧಾನಿ ಮೋದಿ, ಫ್ಲೈ ಓವರ್ ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದರು. ಈ ಘಟನೆಗೆ ಪಂಜಾಬ್ ಪೊಲೀಸ್ ಇಲಾಖೆ ನೇರ ಕಾರಣ ಎಂದು ಕೇಂದ್ರ ಗೃಹ ಇಲಾಖೆ ಅಧಿಕಾರಿ ಆರೋಪಿಸಿದ್ದಾರೆ.
ಈ ನಡುವೆ ಪ್ರಧಾನಿ ಮೋದಿ ಪ್ರಯಾಣಕ್ಕೆ ಪಂಜಾಬ್ ನಲ್ಲಿ ಅಡ್ಡಿಯುಂಟಾದ ಘಟನೆಗೆ ಪ್ರತಿಕ್ರಿಯಿಸಿರುವ ನಟಿ ಕಂಗನಾ, ಇದೊಂದು ನಾಚಿಕೆಗೇಡಿನ ಸಂಗತಿ. ಪ್ರಜಾತಂತ್ರದ ಮೇಲೆ ನಡೆದ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ಕಂಗನಾ, ಪ್ರಧಾನಿ ಮೋದಿ ಪ್ರಜಾತಂತ್ರದ ನಾಯಕ. 140 ಕೋಟಿ ಜನರ ಧ್ವನಿ. ಅವರ ಮೇಲೆ ನಡೆದ ಈ ದಾಳಿ ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿ. ಪಂಜಾಬ್ ಭಯೋತ್ಪಾದಕ ಚಟುವಟಿಕೆಗಳ ಕೇಂದ್ರವಾಗುತ್ತಿದೆ. ಈಗಲೇ ಇಂತಹ ಚಟುವಟಿಕೆ ತಡೆಯದಿದ್ದರೆ ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.