ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಬೂಸ್ಟರ್ ಡೋಸ್ ಬಗ್ಗೆ ಮಹತ್ವದ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ ಲಸಿಕೆಗಳ ಮಿಶ್ರಣ ಮಾಡಬಾರದು ಎಂದು ಸ್ಪಷ್ಟಪಡಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿರುವ NITI ಆಯೋಗದ ಸದಸ್ಯ ಡಾ ವಿನೋದ್ ಕೆ ಪಾಲ್, ಕೋವಾಕ್ಸಿನ್ ಪಡೆದವರು ಕೋವಾಕ್ಸಿನ್ ಸ್ವೀಕರಿಸುತ್ತಾರೆ. ಕೋವಿಶೀಲ್ಡ್ನ ಪ್ರಾಥಮಿಕ ಎರಡು ಡೋಸ್ಗಳನ್ನು ಪಡೆದವರು ಕೋವಿಶೀಲ್ಡ್ ಅನ್ನು ಸ್ವೀಕರಿಸುತ್ತಾರೆ, ಈ ಮಾರ್ಗದಲ್ಲೆ ನಾವು ಮುಂದುವರೆಯುತ್ತೇವೆ ಎಂದಿದ್ದಾರೆ.
ಲಸಿಕೆಗಳ ಮಿಶ್ರಣದ ಬಗ್ಗೆ ಇನ್ನು ಅಧ್ಯಯನ ನಡೆಯುತ್ತಿದೆ ಹಾಗಾಗಿ ಸಧ್ಯಕ್ಕೆ ಈ ವಿಧಾನದಲ್ಲಿ ಮುಂದುವರೆಯುತ್ತೇವೆ ಎಂದು ವಿನೋದ್ ಪಾಲ್ ಸ್ಪಷ್ಟಪಡಿಸಿದ್ದಾರೆ.
ಆಯ್ದ ಫಲಾನುಭವಿಗಳಿಗೆ ಜನವರಿ 10ರಿಂದ ಬೂಸ್ಟರ್ ಅಥವಾ ಮುನ್ನೆಚ್ಚರಿಕಾ ಡೋಸ್ ಅಭಿಯಾನ ಪ್ರಾರಂಭವಾಗುತ್ತದೆ. ಅಷ್ಟೇ ಅಲ್ಲಾ ಈ ಡೋಸ್ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲೂ ಪ್ರತಿಫಲಿಸುತ್ತದೆ ಎಂದು ವಿನೋದ್ ಪಾಲ್ ತಿಳಿಸಿದ್ದಾರೆ.
ಜನವರಿ 3 ರಿಂದ ಪ್ರಾರಂಭವಾದ 15 ರಿಂದ 18 ವರ್ಷದೊಳಗಿನ ಮಕ್ಕಳ ಲಸಿಕೆ ಅಭಿಯಾನ ಯಶಸ್ವಿಯಾಗುತ್ತಿದೆ. ಬುಧವಾರದವರೆಗೆ ಈ ವಯಸ್ಸಿನ 1 ಕೋಟಿಗೂ ಹೆಚ್ಚು ಮಕ್ಕಳು ತಮ್ಮ ಮೊದಲ ಡೋಸ್ ಅನ್ನು ಪಡೆದಿದ್ದಾರೆ. 15 ರಿಂದ 18 ವರ್ಷದೊಳಗಿನ 7.4 ಕೋಟಿ ಮಕ್ಕಳಿದ್ದಾರೆ ಎಂದು ನಾವು ಅಂದಾಜಿಸಿದ್ದೇವೆ. ಹೀಗೆ ಮುಂದುವರೆದರೆ ತ್ವರಿತವಾಗಿ ಲಸಿಕಾಕರಣ ಪೂರ್ಣಗೊಳ್ಳುತ್ತದೆ ಎಂದು ವಿನೋದ್ ಪಾಲ್ ತಿಳಸಿದ್ದಾರೆ.