ಉಪಖಂಡದ ಅತಿ ದೊಡ್ಡ ಆಳಿವೆ ನೀರಿನ ಸರೋವರವಾದ ಚಿಲಿಕಾ ಕೆರೆಯಲ್ಲಿ ಈ ವರ್ಷ ದಶಲಕ್ಷಕ್ಕೂ ಹೆಚ್ಚಿನ ಪಕ್ಷಿಗಳು ಆಗಮಿಸಿವೆ.
ಜಲಪಕ್ಷಿಗಳ ಸ್ಥಿತಿ ಸಮೀಕ್ಷೆ-2022ರ ಪ್ರಕಾರ, ಜಲಪಕ್ಷಿಗಳ 107 ಜಾತಿಗಳ 10,74,173 ಪಕ್ಷಿಗಳು ಮತ್ತು ಜೌಗು ಪ್ರದೇಶದಲ್ಲಿ ವಾಸಿಸುವ 76 ಜಾತಿಯ 37,953 ಪಕ್ಷಿಗಳು ಇಡೀ ಪ್ರದೇಶದಲ್ಲಿ ಲೆಕ್ಕಕ್ಕೆ ಸಿಕ್ಕಿವೆ. ಕಳೆದ ವರ್ಷ ಚಿಲಿಕಾ ಸರೋವರದಲ್ಲಿ 12 ಲಕ್ಷಕ್ಕೂ ಹೆಚ್ಚಿನ ಪಕ್ಷಿಗಳು ಆಗಮಿಸಿದ್ದವು.
ಇದೇ ವೇಳೆ, ಅಪರೂಪಕ್ಕೆ ಕಾಣಿಸುವ ಮಂಗೋಲಿಯನ್ ಗಲ್ ಪಕ್ಷಿಗಳೂ ಸಹ ಕಣ್ಣಿಗೆ ಬಿದ್ದಿವೆ. ಸಮೀಕ್ಷೆಯನ್ನು ಒಡಿಶಾ ರಾಜ್ಯ ವನ್ಯಜೀವಿ ಸಂಸ್ಥೆ, ಚಿಲಿಕಾ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಹಯೋಗದಲ್ಲಿ ನಡೆಸಿವೆ. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ 106 ಸಿಬ್ಬಂದಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.
ದೂರದ ಕ್ಯಾಸ್ಪಿಯನ್ ಸರೋವರ, ಬೈಯ್ಕಾಲ್ ಸರೋವರ, ಆರಲ್ ಸಮುದ್ರ, ರಷ್ಯಾದ ಅನೇಕ ಪ್ರದೇಶಗಳು, ಮಂಗೋಲಿಯಾ ಕಿರ್ಘಿಜ಼್ ಸ್ಟೆಪ್ಪಿಸ್, ಕೇಂದ್ರ ಮತ್ತು ಆಗ್ನೇಯ ಏಷ್ಯಾ, ಲಡಾಖ್ ಮತ್ತು ಹಿಮಾಲಯಗಳಿಂದೆಲ್ಲಾ ಚಿಲಿಕಾ ಸರೋವರದ ಪ್ರದೇಶಕ್ಕೆ ಪಕ್ಷಿಗಳು ವಲಸೆ ಬರುತ್ತವೆ. ಚಿಲಿಕಾದ ಜೌಗು ವಾತಾವರಣ ಮತ್ತು ಹೇರಳವಾಗಿ ದೊರಕುವ ಜಲಚರಗಳು ಈ ಪಕ್ಷಿಗಳಿಗೆ ಈ ಜಾಗ ಇಷ್ಟವಾಗುವಂತೆ ಮಾಡಿವೆ.