ವಿದೇಶದಲ್ಲಿ ಹಲವು ಬಾರಿ ಕೋವಿಡ್ ಲಸಿಕೆ ಪಡೆದು ಸಿಕ್ಕಿ ಬಿದ್ದಿರುವ ಪ್ರಸಂಗಗಳು ಬೆಳಕಿಗೆ ಬಂದಿದ್ದವು. ಆದರೆ, ಭಾರತದಲ್ಲಿಯೂ ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದ್ದು, 84 ವರ್ಷದ ವ್ಯಕ್ತಿಯೊಬ್ಬ 12ನೇ ಬಾರಿ ಲಸಿಕೆ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ.
ಕೊರೊನಾಗೆ ಭಯಪಟ್ಟು ಬಿಹಾರ ರಾಜ್ಯದ ಮಾಧೇಪುರ ಜಿಲ್ಲೆಯ ಓರೈ ಗ್ರಾಮದ 84 ವರ್ಷದ ವೃದ್ಧನೊಬ್ಬ 11 ಬಾರಿ ಲಸಿಕೆ ಪಡೆದು, 12ನೇ ಬಾರಿ ಮತ್ತೊಮ್ಮೆ ಪಡೆಯಲು ಹೋದಾಗ ಸಿಕ್ಕಿ ಬಿದ್ದಿದ್ದಾರೆ.
ಬ್ರಹ್ಮದೇವ್ ಮಂಡಲ್ ಎಂಬ ವೃದ್ಧನೇ ಹೀಗೆ ಸಿಕ್ಕಿ ಹಾಕಿಕೊಂಡಿದ್ದು, ನನಗೆ ಲಸಿಕೆಯಿಂದ ಸಾಕಷ್ಟು ಉಪಯೋಗಗಳಾಗಿವೆ. ಹೀಗಾಗಿಯೇ ನಾನು 11 ಲಸಿಕೆಗಳನ್ನು ಹಾಕಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
2021ರ ಫೆಬ್ರವರಿಯಲ್ಲಿ ಇವರು ಮೊದಲ ಲಸಿಕೆ ಹಾಕಿಸಿಕೊಂಡಿದ್ದು, ಡಿ. 30ರ ವೇಳೆಗೆ 11 ಬಾರಿ ಹಾಕಿಸಿಕೊಂಡಿದ್ದಾರೆ. ತಾವು ಎಲ್ಲಿ ಹಾಗೂ ಯಾವಾಗ ಲಸಿಕೆ ಹಾಕಿಸಿಕೊಂಡಿದ್ದೇನೆ ಎಂಬ ಕುರಿತು ಕೂಡ ಅವರು ಹೇಳಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವುದಕ್ಕಾಗಿ ಪತ್ನಿ ಸೇರಿದಂತೆ ಬೇರೆಯವರ ಫೋನ್ ನಂಬರ್ ಗಳನ್ನು ಬಳಕೆ ಮಾಡಿಕೊಂಡಿರುವ ಕುರಿತು ಕೂಡ ಅವರು ಹೇಳಿದ್ದಾರೆ ಎನ್ನಲಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.