ಧಾರವಾಡ: ಎಲ್ಲಾ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲಾ ಸದಸ್ಯರು ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಭೇಟ್ಟಿ ನೀಡಿ, ಒಂದು ಬಾರಿ Electronic Know Your Customer (ಇ-ಕೆವೈಸಿ) ನೀಡಬಹುದು.
ಪಡಿತರ ಚೀಟಿಯಲ್ಲಿರುವ ಕುಟುಂಬದ ಎಲ್ಲಾ ಸದಸ್ಯರು ತಮ್ಮ ನ್ಯಾಯಬೆಲೆ ಅಂಗಡಿಗೆ ಹೋಗಿ ಬೆರಳಚ್ಚು ನೀಡುವ ಪ್ರಕ್ರಿಯೆಯಾಗಿರುತ್ತದೆ. ಇ-ಕೆವೈಸಿ ಸೇವೆಯು ಉಚಿತ ಸೇವೆಯಾಗಿರುತ್ತದೆ. ಇದಕ್ಕಾಗಿ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿ ಸಂಚಾಲಕರಿಗೆ ಯಾವುದೇ ದುಡ್ಡು ನೀಡುವ ಅವಶ್ಯಕತೆ ಇಲ್ಲ. ಒಂದು ವೇಳೆ ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಸಂಬಂಧಪಟ್ಟ ತಹಶೀಲದಾರರು ಹಾಗೂ ತಾಲ್ಲೂಕಿನ ಆಹಾರ ಶಿರಸ್ತೇದಾರ, ನಿರೀಕ್ಷಕರುಗಳಿಗೆ ಮತ್ತು ಉಪ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಧಾರವಾಡ ಇವರಿಗೆ ದೂರು ಸಲ್ಲಿಸಬಹುದು.
ಸರ್ಕಾರವು ಇ-ಕೆವೈಸಿ ನೀಡಲು ಜನವರಿ 10 ರವರೆಗೆ ಕೊನೆಯ ಅವಕಾಶ ನೀಡಲಾಗಿದೆ. ಒಂದು ವೇಳೆ ಈ ಅವಧಿಯಲ್ಲಿ ಇ-ಕೆವೈಸಿ ಮಾಡಿಸದಿದ್ದಲ್ಲಿ ಮುಂದಿನ ಆಗುಹೋಗುಗಳಿಗೆ ಪಡಿತರ ಚೀಟಿದಾರರೆ ನೇರ ಹೊಣೆಗಾರರಾಗಿರುತ್ತಾರೆ. ಈ ಗಡುವಿನೊಳಗೆ ಇ-ಕೆವೈಸಿ ಮಾಡಿಸದ ಪಡಿತರ ಚೀಟಿಗಳು ಮತ್ತು ಸದಸ್ಯರ ಬಗ್ಗೆ ಸರ್ಕಾರವು ಸೂಕ್ತ ನಿರ್ದೇಶನ ನೀಡಲಿದೆ. ಆದ್ದರಿಂದ ಇ-ಕೆವೈಸಿ ನೀಡಲು ಬಾಕಿ ಇರುವ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇ-ಕೆವೈಸಿ ಮಾಡಿಸುವಂತೆ ಪಡಿತರ ಚೀಟಿದಾರರುಗಳಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.