ನವದೆಹಲಿ : ದೇಶದಲ್ಲಿ ಓಮಿಕ್ರಾನ್ ನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಇದು ಕೊರೊನಾ ರೂಪಾಂತರಿ ಓಮಿಕ್ರಾನ್ ನಿಂದ ಸಂಭಸಿದ ಮೊದಲ ಸಾವು ಎಂದು ತಿಳಿದುಬಂದಿದೆ.
ದೇಶದಲ್ಲಿ ಓಮಿಕ್ರಾನ್ ನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಲವೆಡೆ ಓಮಿಕ್ರಾನ್ ಸೋಂಕು ಸಮುದಾಯಕ್ಕೂ ಹಬ್ಬಿರುವ ಕುರಿತು ತಜ್ಞರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ರಾಜಸ್ಥಾನದಲ್ಲಿ ಓಮಿಕ್ರಾನ್ ಸೋಂಕಿನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ಈ ಕುರಿತು ರಾಜ್ಯ ಆರೋಗ್ಯ ಇಲಾಖೆಯ ಮೂಲ ಖಚಿತಪಡಿಸಿದ್ದು, ಓಮಿಕ್ರಾನ್ ನಿಂದ ಸಾವನ್ನಪ್ಪಿದ ಮೊದಲ ಪ್ರಕರಣ ಇದು ಎನ್ನಲಾಗುತ್ತಿದೆ.
ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಇಲ್ಲಿಯವರೆಗೂ ದೇಶದಲ್ಲಿ 2,135 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ದೇಶದ 23 ರಾಜ್ಯಗಳಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಪ್ರಮುಖ ನಗರಗಳಲ್ಲಿಯೇ ಈ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ. ಮುಂಬೈ, ದೆಹಲಿಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿವೆ.
ಇಲ್ಲಿಯವರೆಗೂ ಓಮಿಕ್ರಾನ್ ಸೌಮ್ಯ ಲಕ್ಷಣಗಳನ್ನು ಹೊಂದಿರುತ್ತದೆ ಎಂದೇ ತಜ್ಞರು ಹೇಳುತ್ತಿದ್ದರು. ಆದರೆ, ಇದರಿಂದ ಓರ್ವ ವ್ಯಕ್ತಿಯ ಸಾವಿನ ಕುರಿತು ವರದಿಯಾಗಿದ್ದಕ್ಕೆ ಆತಂಕ ಮನೆ ಮಾಡುತ್ತಿದೆ. ಹಲವು ರಾಜ್ಯಗಳಲ್ಲಿ ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ.