ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಚಾರದ ಭಾಗವಾದ ಮಹಿಳಾ ಮ್ಯಾರಥಾನ್ ಅಭಿಯಾನವನ್ನ ಮುಂದೂಡಿದೆ. ಉತ್ತರ ಪ್ರದೇಶ ಚುನಾವಣೆಯ ಜವಾಬ್ದಾರಿ ಹೊತ್ತಿರುವ ಪ್ರಿಯಾಂಕಗಾಂಧಿ ವಾದ್ರಾ, ‘ಲಡ್ಕಿ ಹೂಂ, ಲಡ್ ಸಕ್ತಿ ಹೂಂ’ ಎಂಬ ಘೋಷಣೆ ಮೂಲಕ ಚುನಾವಣೆ ಕಣಕ್ಕಿಳಿದಿದ್ದಾರೆ.
ಇದೇ ಪ್ರಚಾರದ ಭಾಗವಾದ ‘ಮಹಿಳಾ ಮ್ಯಾರಥಾನ್ ‘ ಅಭಿಯಾನವನ್ನ ಮಂಗಳವಾರ ಬರೇಲಿಯಲ್ಲಿ ನಡೆಸಲಾಗಿತ್ತು. ಆದರೆ ಮ್ಯಾರಥಾನ್ ಶುರುವಾಗೋಕು ಮುನ್ನ ಅಲ್ಲಿ ಉಂಟಾದ ಜನದಟ್ಟಣೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು ಮುಗ್ಗರಿಸಿ ಬಿದ್ದರು, ಜೊತೆಗೆ ಸ್ಥಳದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿಯು ಸೃಷ್ಟಿಯಾಗಿತ್ತು.
ಈ ಘಟನೆ ನಡೆದ ಒಂದು ದಿನದ ನಂತರ ಕಾಂಗ್ರೆಸ್ ಅಭಿಯಾನ ಮುಂದೂಡುವ ನಿರ್ಧಾರಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ನೋಯ್ಡಾ, ವಾರಣಾಸಿ ಮತ್ತು ಯುಪಿಯ ಇತರ ಪ್ರದೇಶಗಳಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆ. ಈ ವಿಚಾರವಾಗಿ ಬರೇಲಿ ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶ್ಫಾಕ್ ಸಕ್ಲೈನಿ ಹಾಗೂ ಇತರರ ಮೇಲೆ ಎಫ್ಐಆರ್ ದಾಖಲಾಗಿದೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR), ಈ ಬಗ್ಗೆ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಕಾರಣರಾದವರ ವಿರುದ್ಧ 24 ಗಂಟೆಯೊಳಗೆ ಕ್ರಮ ತೆಗೆದುಕೊಳ್ಳುವಂತೆ ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಪತ್ರ ಬರೆದಿದೆ. ಜೊತೆಗೆ ಏಳು ದಿನಗಳೊಳಗೆ ಈ ಬಗ್ಗೆ ಸಂಪೂರ್ಣ ತನಿಖೆಯಾಗಿರಬೇಕು ಎಂದು ಉಲ್ಲೇಖಿಸಿದೆ.
ಎನ್ಸಿಪಿಸಿಆರ್ ಕಳುಹಿಸಿರುವ ನೋಟಿಸ್ ಬಿಜೆಪಿ, ಕಾಂಗ್ರೆಸನ್ನು ತುಳಿಯಲು ರೂಪಿಸಿರುವ ಸಂಚಿನ ಒಂದು ಭಾಗವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಅಂಶು ಅವಸ್ತಿ ಆರೋಪಿಸಿದ್ದಾರೆ. ಪ್ರಿಯಾಂಕಾ ಗಾಂಧಿಯವರ ನಾಯಕತ್ವದಿಂದ ಯುಪಿಯ ಮಹಿಳೆಯರು ಸಬಲರಾಗುತ್ತಿದ್ದಾರೆ. ಮಹಿಳೆಯರು ರಾಜಕೀಯಕ್ಕೆ ಬರುವುದನ್ನು ತಡೆಯಲು ಬಿಜೆಪಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಕಮಿಷನ್ ಬಳಸಿ ನಮ್ಮನ್ನು ಟಾರ್ಗೆಟ್ ಮಾಡುತ್ತಿದೆ. ಆದರೆ ನಾವು ನಿಲ್ಲುವುದಿಲ್ಲ. ಕೋವಿಡ್ನಿಂದಾಗಿ ವಿಧಿಸಲಾದ ಲಾಕ್ಡೌನ್ ಸಮಯದಲ್ಲಿ ಮಕ್ಕಳು ಬರಿಗಾಲಿನಲ್ಲಿ ನಡೆಯುತ್ತಿದ್ದಾಗ ಆಯೋಗ ಎಲ್ಲಿತ್ತು, ಎಂದು ಅವಸ್ತಿ ಆಕ್ರೋಶ ಹೊರಹಾಕಿದ್ದಾರೆ.