ಶಿವಮೊಗ್ಗ: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಈ ನಿಯಮ ಕಾಂಗ್ರೆಸ್ ಪಕ್ಷಕ್ಕೂ ಅನ್ವಯವಾಗಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಕಟ್ಟುನಿಟ್ಟಿನ ನಿಯಮವನ್ನು ಕೇವಲ ಜನ ಸಾಮಾನ್ಯರಿಗೆ ಮಾತ್ರ ಜಾರಿಗೊಳಿಸಿಲ್ಲ. ರಾಜ್ಯದಲ್ಲಿನ ಪ್ರತಿಯೊಬ್ಬ ನಾಗರಿಕನಿಗೂ ಈ ನಿಯಮಗಳು ಅನ್ವಯವಾಗಲಿವೆ. ಹೀಗಾಗಿ ಈ ನಿಯಮಗಳನ್ನು ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಪಾಲಿಸಬೇಕು ಎಂದು ಹೇಳಿದ್ದಾರೆ.
ಸರ್ಕಾರವು ತಜ್ಞರೊಂದಿಗೆ ಚರ್ಚೆ ಮಾಡಿಯೇ ಎಲ್ಲ ಕ್ರಮಗಳನ್ನು ಜಾರಿಗೆ ತಂದಿದೆ. ಆದರೆ, ಕಾಂಗ್ರೆಸ್ ಪಕ್ಷವು ಜನರ ಜೀವದೊಂದಿಗೆ ಚೆಲ್ಲಾಟವಾಡುವಂತಹ ಕಾರ್ಯಕ್ಕೆ ಕೈ ಹಾಕುತ್ತಿದೆ. ಜನರ ಪ್ರಾಣ ಉಳಿಸುವುದಕ್ಕಾಗಿಯೇ ಸರ್ಕಾರ ಇಂತಹ ಕಠಿಣ ನಿರ್ಧಾರ ಕೈಗೊಂಡಿದೆ. ನಾವೇನು ಕಾಂಗ್ರೆಸ್ ಪಕ್ಷಕ್ಕಾಗಿ ಬೇರೆ ನಿಯಮ ಜಾರಿಗೊಳಿಸಿಲ್ಲ. ರಾಜ್ಯದಲ್ಲಿ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೈ ಕಟ್ಟಿ ಕುಳಿತುಕೊಳ್ಳಲು ಬರುವುದಿಲ್ಲ ಎಂದು ಹೇಳಿದ್ದಾರೆ.
ಸರ್ಕಾರವು ಈಗಾಗಲೇ ಕೊರೊನಾ ಹತ್ತಿಕ್ಕುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಆದರೆ, ಕಾಂಗ್ರೆಸ್ ತನ್ನ ಮೊಂಡುತನ ಪ್ರದರ್ಶಿಸಿದರೆ, ಕಾನೂನು ಕ್ರಮಗಳನ್ನು ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.