ಬೆಂಗಳೂರು : ರಾಜ್ಯದಲ್ಲಿ ಕೊರೊನಾದೊಂದಿಗೆ ಓಮಿಕ್ರಾನ್ ಸ್ಫೋಟವಾಗಿದ್ದು, ಇಂದು ಬರೋಬ್ಬರಿ ರಾಜ್ಯದ 149 ಜನರಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ.
ಈ ಸಂಖ್ಯೆ ಕೇಳಿದ ಕೂಡಲೇ ರಾಜ್ಯದ ಜನರು ಬೆಚ್ಚಿ ಬೀಳುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಹೊಸ ರೂಪಾಂತರಿಯ ಸೋಂಕಿತರ ಸಂಖ್ಯೆ 226ಕ್ಕೆ ಏರಿಕೆಯಾಗಿದೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ 149 ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಬೆಂಗಳೂರು ನಗರದಲ್ಲಿ 8 ಜನ ಹಿರಿಯ ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ 8 ವಲಯಗಳಲ್ಲಿ ಸೋಂಕು ಹೆಚ್ಚಳವಾಗದಂತೆ ತಡೆಯಲು ತಂಡ ರಚಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸೇರಿದಂತೆ ಬೆಂಗಳೂರಿನಲ್ಲಿ ಕೊರೊನಾ ತಾಂಡವವಾಡುತ್ತಿದೆ. ದಿನದಿಂದ ದಿನಕ್ಕೆ ತನ್ನ ದಾಖಲೆಯನ್ನೇ ಮುರಿದು ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಮಧ್ಯೆಯೇ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕಿತರ ಸಂಖ್ಯೆಯಲ್ಲಿ ಕೂಡ ಹೆಚ್ಚಳವಾಗುತ್ತಿರುವುದು ಮತ್ತಷ್ಟು ಆತಂಕ ಹೆಚ್ಚಿಸುತ್ತಿದೆ.
ಕೊರೊನಾ ಹೆಚ್ಚಳವಾಗುತ್ತಿರುವ ಮಧ್ಯೆಯೇ ರಾಜ್ಯ ಸರ್ಕಾರವು ನಿನ್ನೆಯಷ್ಟೇ ವೀಕೆಂಡ್ ಕರ್ಫ್ಯೂ ಸೇರಿದಂತೆ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಘೋಷಿಸಿದೆ. ಬೆಂಗಳೂರಿನಲ್ಲಿನ ಶಾಲಾ – ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಇದರ ಮಧ್ಯೆ ಓಮಿಕ್ರಾನ್ ಹೆಚ್ಚಳವಾಗಿದ್ದಕ್ಕೆ ಮತ್ತಷ್ಟು ಆತಂಕ ಮನೆ ಮಾಡುತ್ತಿದೆ. ಹೀಗಾಗಿ ಮತ್ತಷ್ಟು ಕಠಿಣ ನಿಯಮಗಳನ್ನು ರಾಜ್ಯಾದ್ಯಂತ ಜಾರಿಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.