ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ಹಾಗೂ ಕೊರೊನಾ ರೂಪಾಂತರಿ ಓಮಿಕ್ರಾನ್ ನ ಹಾವಳಿ ವಿಪರೀತವಾಗಿ ಹೆಚ್ಚಳವಾಗುತ್ತಿದೆ.
ಹೀಗಾಗಿ ಅಲ್ಲಿನ ಸರ್ಕಾರವು ಆದೇಶವೊಂದನ್ನು ಹೊರಡಿಸಿದ್ದು, ದೆಹಲಿಯಲ್ಲಿರುವ ಆಸ್ಪತ್ರೆಯಲ್ಲಿನ ಶೇ.50 ಅಥವಾ ಅದಕ್ಕಿಂತ ಹೆಚ್ಚು ಬೆಡ್ ಗಳನ್ನು ಕೊರೊನಾ ರೋಗಿಗಳಿಗೆ ಮೀಸಲಿಡಬೇಕು ಎಂದು ಹೇಳಿದೆ.
ಈ ಕುರಿತು ದೆಹಲಿ ಸರ್ಕಾರ, ನರ್ಸಿಂಗ್ ಹೋಂ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 5,481 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದು ಕಳೆದ ವರ್ಷ ಮೇ 16ರಂದು ದಾಖಲಾಗಿದ್ದ ನಂತರ ಅತಿ ಹೆಚ್ಚಿನ ಸೋಂಕಿತರ ಸಂಖ್ಯೆಯಾಗಿದೆ. ಅಲ್ಲಿ ಕಳೆದ 24 ಗಂಟೆಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಹೀಗಾಗಿ ದೆಹಲಿಯಲ್ಲಿ ಮೂರನೇ ಅಲೆಯ ಆತಂಕ ಶುರುವಾಗಿದೆ. ಓಮಿಕ್ರಾನ್ ಪ್ರಕರಣಗಳು ಕೂಡ ಸಮುದಾಯಕ್ಕೆ ಹಬ್ಬುತ್ತಿದೆ ಎನ್ನಲಾಗುತ್ತಿದೆ. ಕೊರೊನಾ ಹಾಗೂ ಹೊಸ ರೂಪಾಂತರಿಯಿಂದಾಗಿ 308 ಜನ ರೋಗಿಗಳು ಸಾಮಾನ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. 168 ಜನರಲ್ಲಿ ಸೌಮ್ಯ ಲಕ್ಷಣಗಳು ಕಂಡು ಬಂದಿದ್ದು, 14 ಜನರಲ್ಲಿ ರೋಗ ಸ್ವಲ್ಪ ಹೆಚ್ಚಾಗಿ ಉಲ್ಭಣವಾಗಿದ್ದು, ಇವರೆಲ್ಲ ಕೃತಕ ಉಸಿರಾಟದ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಜನರಿಗೆ ಜಾಗೃತಿ ವಹಿಸುವಂತೆ ತಿಳಿಸಲಾಗಿದ್ದು, ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.