ದೆಹಲಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕನ್ನ ನಿಯಂತ್ರಿಸಲು ದೆಹಲಿ ಸರ್ಕಾರ, ರಾಷ್ಟ್ರ ರಾಜಧಾನಿಯಲ್ಲಿ ವೀಕೆಂಡ್ ಕರ್ಫ್ಯೂ ವಿಧಿಸಲು ನಿರ್ಧರಿಸಿದೆ. ದೆಹಲಿ ಕೊರೋನಾ ಸ್ಥಿತಿಗತಿ ಬಗ್ಗೆ ಸರ್ಕಾರದೊಂದಿಗೆ ವರ್ಚುವಲ್ ಸಭೆ ನಡೆಸಿದ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ(DDMA), ಈ ಆದೇಶ ಹೊರಡಿಸಿದೆ.
ವೀಕೆಂಡ್ ಕರ್ಫ್ಯೂ ಜೊತೆಗೆ ಅಗತ್ಯ ಸೇವೆಗಳನ್ನ ಹೊರತುಪಡಿಸಿ ಇನ್ನುಳಿದ ಸರ್ಕಾರಿ ಉದ್ಯೋಗಿಗಳು ಮನೆಯಿಂದಲೆ ಕೆಲಸ(Work from home) ಮಾಡಬೇಕು ಎಂದು ಪ್ರಾಧಿಕಾರ ಆದೇಶ ನೀಡಿದೆ.
ಈ ಬಗ್ಗೆ ಮಾತನಾಡಿರುವ ದೆಹಲಿಯ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಕಚೇರಿಗಳು ತಮ್ಮ ಅರ್ಧದಷ್ಟು ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಲು ತಿಳಿಸಬೇಕು. ಕೋವಿಡ್ ಉಲ್ಬಣವನ್ನು ತಡೆಯಲು ಶನಿವಾರ ಮತ್ತು ಭಾನುವಾರದಂದು ದೆಹಲಿಯಲ್ಲಿ ಕರ್ಫ್ಯೂ ವಿಧಿಸಲು ಡಿಡಿಎಂಎ ನಿರ್ಧರಿಸಿದೆ.
ಅಗತ್ಯ ಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ಅಧಿಕಾರಿಗಳು ಮನೆಯಿಂದಲೇ ಕೆಲಸ ಮಾಡುತ್ತಾರೆ. ಖಾಸಗಿ ಕಚೇರಿಗಳ 50% ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಸರ್ಕಾರ ಆದೇಶಿಸಿದೆ.
ಮೆಟ್ರೋ ನಿಲ್ದಾಣಗಳ ಹೊರಗೆ ಮತ್ತು ಬಸ್ ನಿಲ್ದಾಣಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಬಸ್ಸುಗಳು ಮತ್ತು ಮೆಟ್ರೋ ರೈಲುಗಳು ಮತ್ತೆ ಪೂರ್ಣ ಆಸನ ಸಾಮರ್ಥ್ಯದಲ್ಲಿ ಓಡುತ್ತವೆ, ಆದರೆ ಕೊರೋನಾ ಬಗ್ಗೆ ಕಾಳಜಿ ಇರಲಿ. ಒಮಿಕ್ರಾನ್ ರೂಪಾಂತರದ ಪ್ರಕರಣಗಳು ವೇಗವಾಗಿ ಹರಡುತ್ತಿವೆ, ದೆಹಲಿಯಲ್ಲಿ ಕಳೆದ 8-10 ದಿನಗಳಲ್ಲಿ ಸುಮಾರು 11,000 ಪ್ರಕರಣಗಳು ವರದಿಯಾಗಿವೆ, ಅದರಲ್ಲಿ ಸುಮಾರು 350 ರೋಗಿಗಳು ಆಸ್ಪತ್ರೆಯಲ್ಲಿದ್ದಾರೆ. 124 ರೋಗಿಗಳು ಆಕ್ಸಿಜನ್ ಬೆಡ್ ನಲ್ಲಿದ್ದಾರೆ, ಮತ್ತು 7 ಮಂದಿ ವೆಂಟಿಲೇಟರ್ನಲ್ಲಿದ್ದಾರೆ ಎಂದು ಸಿಸೋಡಿಯಾ ತಿಳಿಸಿದ್ದಾರೆ.