ಅವಧಿಗೂ ಮುನ್ನ ಜನಿಸಿದ ಮಗು ಸತ್ತಿದೆ ಎಂದು ಘೋಷಿಸಿದ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಸಮಾಧಿ ಮಾಡಲು ಸಿದ್ಧತೆ ನಡೆಸುತ್ತಿದ್ದ ವೇಳೆಯಲ್ಲಿ ಮಗು ಬದುಕಿದೆ ಎಂದು ತಿಳಿದು ಬಂದ ವಿಲಕ್ಷಣ ಘಟನೆಯೊಂದು ಬ್ರೆಜಿಲ್ನ ರೊಂಡೋನಿಯಾದ ಅರಿಕ್ವೆಮ್ಸ್ ಪುರಸಭೆ ವ್ಯಾಪ್ತಿಯಲ್ಲಿ ನಡೆದಿದೆ.
18 ವರ್ಷದ ಯುವತಿಗೆ ತಾನು ಗರ್ಭಿಣಿ ಎಂಬ ವಿಚಾರವೇ ತಿಳಿದಿರಲಿಲ್ಲವಂತೆ. ಹೊಟ್ಟೆಯಲ್ಲಿ ಅತಿಯಾದ ನೋವು ಕಂಡು ಬಂದ ಹಿನ್ನೆಲೆಯಲ್ಲಿ ಯುವತಿಯು ಎರಡು ಬಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ಎರಡೂ ಬಾರಿಯೂ ವೈದ್ಯರು ಆಕೆಯನ್ನು ಮನೆಗೆ ಕಳುಹಿಸಿದ್ದಾರೆ. ಆಸ್ಪತ್ರೆಯ ವೈದ್ಯರಿಗೂ ಆಕೆ ಗರ್ಭಿಣಿ ಎಂಬುದು ಮೊದಲಿಗೆ ಗಮನಕ್ಕೆ ಬಾರಲಿಲ್ಲ ಎಂದು ಯುವತಿಯ ಕುಟುಂಬಸ್ಥರು ಹೇಳಿದ್ದಾರೆ.
ಆದರೆ ಮನೆಯಲ್ಲಿದ್ದ ವೇಳೆಯಲ್ಲಿ ಯುವತಿಗೆ ಹೊಟ್ಟೆಯ ನೋವು ಇನ್ನಷ್ಟು ಜಾಸ್ತಿಯಾಗಿದೆ. ಹೀಗಾಗಿ ಆಕೆ ಯಾವುದೇ ವೈದ್ಯಕೀಯ ಸಹಾಯವಿಲ್ಲದೇ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಮಗು ಅವಧಿ ಪೂರ್ವ ಅಂದರೆ ಕೇವಲ 7 ತಿಂಗಳಿಗೆ ಜನಿಸಿದ್ದರಿಂದ ಕೇವಲ 907 ಗ್ರಾಮ್ ತೂಕವನ್ನು ಹೊಂದಿತ್ತು.
ಕೂಡಲೇ ಅವಧಿ ಪೂರ್ವ ಜನಿಸಿದ ಮಗುವಿನ ಸಮೇತ ಯುವತಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಇಲ್ಲಿ ವೈದ್ಯರು ನವಜಾತ ಶಿಶು ಮೃತಪಟ್ಟಿದೆ ಎಂದು ಹೇಳಿದ್ದಾರೆ. ಹೀಗಾಗಿ ಮಗುವನ್ನು ಸಮಾಧಿ ಮಾಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಲಾಗುತ್ತಿತ್ತು. ಈ ವೇಳೆಯಲ್ಲಿ ಮಗುವಿನ ಹೃದಯ ಬಡಿತವನ್ನು ಗಮನಿಸಲಾಗಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.