ಓಮಿಕ್ರಾನ್ ಕೊರೊನಾ ರೂಪಾಂತರಿಯ ಹರಡುವ ವೇಗ ಹೆಚ್ಚಳಗೊಂಡು ದೇಶಾದ್ಯಂತ ಸೋಂಕಿತರು ಹೆಚ್ಚುತ್ತಿದ್ದಾರೆ. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜತೆಗೆ ಮೂರನೇ ಅಲೆಯು ಉತ್ತುಂಗಕ್ಕೆ ಏರುವ ಮೂಲಕ ಮತ್ತೆ ಲಾಕ್ಡೌನ್ ಹೇರಿಕೆ ಆಗುವ ಭೀತಿ ಜನರನ್ನು ಬಾಧಿಸಲು ಶುರು ಮಾಡಿದೆ.
ದೆಹಲಿ, ಮುಂಬಯಿ ಹಾಗೂ ಕೋಲ್ಕೊತಾ ನಗರಗಳಲ್ಲಿ ಕೊರೊನಾ ಪಾಸಿಟಿವಿಟಿ ದರವು ಎಚ್ಚರಿಕೆಯ ಪ್ರಮಾಣ ತಲುಪಿದೆ.
ನಿತ್ಯ 2 ಸಾವಿರ ಜನರಿಗೆ ಸೋಂಕು ಹರಡುತ್ತಿದ್ದು, ಆ ಪೈಕಿ ಶೇ.85ರಷ್ಟು ಸೋಂಕಿತರಲ್ಲಿ ರೋಗ ಲಕ್ಷ ಣಗಳು ಗೋಚರವಾಗುತ್ತಿಲ್ಲ.
ಇದು ಒಂದೆಡೆ ಸಮಾಧಾನಕರ ವಿಚಾರವಾದರೆ, ರೋಗಲಕ್ಷಣಗಳು ಸೌಮ್ಯ ರೂಪ ಅಥವಾ ಗೋಚರವಾಗದೆಯೇ ಆಂತರಿಕವಾಗಿ ದೇಹಕ್ಕೆ ಯಾವ ರೀತಿ ಹಾನಿ ಮಾಡುತ್ತಿದೆ ಎನ್ನುವ ಖಚಿತ ವೈಜ್ಞಾನಿಕ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಹೀಗಾಗಿ ಕೇಂದ್ರ ಸರ್ಕಾರವು ಮುನ್ನೆಚ್ಚರಿಕೆ ಹೆಜ್ಜೆಯಾಗಿ ಬೂಸ್ಟರ್ ಡೋಸ್ಗಳನ್ನು ನೀಡಲು ಮುಂದಾಗಿದೆ. ಅದು ಕೂಡ, ವೃದ್ಧರು, ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಆರೋಗ್ಯ ಸೇವಾ ಸಿಬ್ಬಂದಿಗೆ ಮಾತ್ರವೇ.
ಅಮೆರಿಕ, ಯುರೋಪ್ಗಳಿಗೆ 4 ಹಾಗೂ 5ನೇ ಕೊರೊನಾ ಅಲೆಯು ಬಾಧಿಸಿರುವ ಕಾರಣ ಬೂಸ್ಟರ್ ಡೋಸ್ಗಳನ್ನು ಕೆಲ ತಿಂಗಳ ಹಿಂದಿನಿಂದಲೇ ನೀಡಲಾಗುತ್ತಿದೆ.
ಡಿ.25ರಂದು ಬೂಸ್ಟರ್ ಡೋಸ್ಗೆ ಮುಂಜಾಗ್ರತೆ ಡೋಸ್ ಎಂದು ಕರೆದು ಪ್ರಧಾನಿ ನರೇಂದ್ರ ಮೋದಿ ಅವರು ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು. ಅದರಂತೆ, ಅರ್ಹ ವ್ಯಕ್ತಿಗಳಿಗೆ ಬೂಸ್ಟರ್ ಡೋಸ್ ಪಡೆಯಲು ಕೋವಿನ್ ವೆಬ್ಸೈಟ್ ಮೂಲಕ ಎಸ್ಎಂಎಸ್ ರವಾನೆ ಆಗಲಿದೆ.
ಅಂಥವರು ಕೋವಿನ್ ವೆಬ್ಸೈಟ್ನಲ್ಲಿ ವೈಯಕ್ತಿಕ ಮಾಹಿತಿಗಳ ನೋಂದಣಿ ಮಾಡುವ ಅಗತ್ಯವಿಲ್ಲ. ಈಗಾಗಲೇ ಹಿಂದಿನ ಎರಡು ಡೋಸ್ ಪಡೆಯುವ ವೇಳೆ ಮಾಡಿಸಿದ ನೋಂದಣಿಯೇ ಸಾಕಾಗಿದೆ ಎಂದು ಕೋವಿನ್ ವೇದಿಕೆ ನಿರ್ವಹಣೆ ಮುಖ್ಯಸ್ಥ ಡಾ. ಆರ್.ಎಸ್. ಶರ್ಮಾ ಹೇಳಿದ್ದಾರೆ.
ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರು ಅವರ ಆಪ್ತವೈದ್ಯರ ಸಲಹೆ ಪಡೆದ ಬಳಿಕ ಬೂಸ್ಟರ್ ಡೋಸ್ಗಳನ್ನು ಪಡೆಯಬಹುದಾಗಿದೆ.
13 ಲಕ್ಷ ಮಕ್ಕಳಿಗೆ ಲಸಿಕೆ:
15 ರಿಂದ 17 ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲು ಅಭಿಯಾನ ಶುರುವಾಗಿದ್ದು, ಸೋಮವಾರ ಒಂದೇ ದಿನ 13 ಲಕ್ಷ ಕ್ಕೂ ಅಧಿಕ ಮಕ್ಕಳು ದೇಶಾದ್ಯಂತ ಲಸಿಕೆ ಪಡೆದಿದ್ದಾರೆ.