ಸಾಂಕ್ರಾಮಿಕ ರೋಗ ಕೋವಿಡ್-19 ಜಗತ್ತಿಗೆ ಕಾಲಿಟ್ಟ ಬಳಿಕ ಬಹುತೇಕ ಮಂದಿಯ ಜೀವನ ಬುಡಮೇಲಾಗಿದೆ. ಇನ್ನು ಕೋವಿಡ್ ಸೋಂಕು ಬಂದವರಂತೂ ತಮ್ಮಿಂದ ಇತರರಿಗೆ ಹರಡದಂತೆ ಬಹಳ ಜಾಗರೂಕತೆ ವಹಿಸಬೇಕಾಗುತ್ತದೆ. ಕಡ್ಡಾಯವಾಗಿ ಪ್ರತ್ಯೇಕವಾಗಿರಬೇಕಾಗುತ್ತದೆ. ನಾಲ್ಕು ಗೋಡೆಗಳ ಮಧ್ಯೆ 14 ದಿನಗಳ ಕಾಲ ತಮಗೆ ತಾವೇ ದಿಗ್ಬಂಧನ ಹಾಕಿಕೊಳ್ಳಬೇಕಾಗಿರುವುದು ಕೋವಿಡ್ ನಿಯಮ.
ಹಾಗೆ ಹೇಳುವುದಾದರೆ, ಕಳೆದ 20 ತಿಂಗಳುಗಳಲ್ಲಿ, ಜನರು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಅನೇಕ ಘಟನೆಗಳು ನಡೆದಿವೆ. ಈ ಘಟನೆಗಳಲ್ಲಿ ಹೆಚ್ಚಿನವು ಜನರು ಮುಖಗವಸುಗಳನ್ನು ಧರಿಸದಿರುವುದು, ಸಾರ್ವಜನಿಕ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಅಥವಾ ಲಾಕ್ಡೌನ್ ಸಮಯದಲ್ಲಿ ಅನಾವಶ್ಯಕ ತಿರುಗಾಟ ಇತ್ಯಾದಿ. ಇದೀಗ, ವೈರಲ್ ಆಗಿರೋ ಕೋವಿಡ್ ಪಾಸಿಟಿವ್ ಬಂದಿರೋ ಮಹಿಳೆಯ ವಿಡಿಯೋ ನೋಡಿದ್ರೆ ನಗು ತರಿಸುತ್ತದೆ.
ಹೌದು, ರಜಾದಿನದ ಹಬ್ಬಗಳನ್ನು ಮಿಸ್ ಮಾಡಿಕೊಳ್ಳಲು ಇಲ್ಲೊಬ್ಬಾಕೆಗೆ ಇಷ್ಟವಿರಲಿಲ್ಲ. ಮಹಿಳೆಗೆ ಕೋವಿಡ್ ಸೋಂಕು ತಗುಲಿದ್ದರೂ, ಕ್ರಿಸ್ಮಸ್ ದಿನದಂದು ತನ್ನ ಕುಟುಂಬದ ಜೊತೆ ಆರಾಮಾದಾಯಕವಾಗಿ, ಬಹಳ ಸಂಭ್ರಮದಿಂದ ಔತಣಕೂಟದಲ್ಲಿ ಪಾಲ್ಗೊಂಡಿದ್ದಾಳೆ. ಅದೂ ಹೇಗೆ ಗೊತ್ತಾ..? ತನಗಾಗಿ ತಯಾರಿಸಿದ ಪ್ಲಾಸ್ಟಿಕ್ ಬಬಲ್ ನಲ್ಲಿ ಕುಳಿತು, ತನ್ನ ಕುಟುಂಬ ವರ್ಗದ ಜೊತೆ ಭರ್ಜರಿಯ ಭೋಜನ ಸವಿದಿದ್ದಾಳೆ.
ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ. ಟಿಕ್ಟಾಕ್ನಲ್ಲಿ ಪೋಸ್ಟ್ ಮಾಡಿದ ನಂತರ ಈ ವಿಡಿಯೋ 11 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಕೆಲವು ಬಳಕೆದಾರರು ಈ ಕಲ್ಪನೆಯನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ವೈರಸ್ ಹರಡುವುದನ್ನು ತಡೆಯಲು ಪ್ಲಾಸ್ಟಿಕ್ ಬಬಲ್ ಸಾಕಷ್ಟು ಪರಿಣಾಮಕಾರಿಯಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.