ವಿಶ್ವದ ಅತ್ಯಂತ ಹಿರಿಯ ಮಹಿಳೆ ಕೇನ್ ತನಕಾ ಅವರು ತಮ್ಮ 119 ನೇ ಹುಟ್ಟುಹಬ್ಬವನ್ನು 2 ಜನವರಿ 2022 ರಂದು ಆಚರಿಸಿಕೊಂಡಿದ್ದಾರೆ. ರೈಟ್ ಸಹೋದರರು ವಿಶ್ವದ ಮೊದಲ ವಿಮಾನ ಕಂಡುಹಿಡಿದ ವರ್ಷದಲ್ಲಿ ಅಂದರೆ 1903ರಲ್ಲಿ ಜಪಾನ್ ದೇಶದಲ್ಲಿ ತನಕಾ ಜನಿಸಿದರು.
ಪ್ರಸ್ತುತ ಅವರು ಫುಕುವೋಕಾದಲ್ಲಿನ ನರ್ಸಿಂಗ್ ಹೋಮ್‌ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಅವರು ಒಗಟುಗಳನ್ನು ಪರಿಹರಿಸುತ್ತಾ ತಮ್ಮ ಸಮಯ ಕಳೆಯುತ್ತಿದ್ದಾರೆ. ಶತಾಯುಷಿ ತನಕಾಗೆ ಸಧ್ಯ ಮಾತನಾಡುವ ಶಕ್ತಿಯಿಲ್ಲ, ಆದರೆ ನರ್ಸಿಂಗ್ ಹೋಮ್ ಸಿಬ್ಬಂದಿಯೊಂದಿಗೆ ಸನ್ನೆಗಳಲ್ಲೆ ಸಂವಹನ ನಡೆಸುತ್ತಾರೆ ಎಂದು ವರದಿಯಾಗಿದೆ.
1922 ರಲ್ಲಿ ಹಿಡಿಯೋ ತನಕಾ ಅವರನ್ನು ವಿವಾಹವಾದ ಕೇನ್ ಐದು ಮಕ್ಕಳಿಗೆ ತಾಯಿಯಾಗಿದ್ದಾರೆ. ಆಕೆಯ ಪತಿ ಮತ್ತು ಹಿರಿಯ ಮಗ ಎರಡನೇ ಚೀನಾ-ಜಪಾನೀಸ್ ಯುದ್ಧದಲ್ಲಿ ಹೋರಾಡಿದ್ದಾರೆ. ಪ್ರಸ್ತುತ ತನಕಾರವರಿಗೆ ಐದು ಮೊಮ್ಮಕ್ಕಳು ಮತ್ತು ಎಂಟು ಮರಿಮಕ್ಕಳಿದ್ದಾರೆ. ಈ ಹಿಂದೆ ತನಕಾ ಆರೋಗ್ಯದಲ್ಲಿ ಏರುಪೇರು ಕಂಡರೂ ಈಗ ಆರೋಗ್ಯವಾಗಿದ್ದಾರೆ. ಅವರು 90 ವರ್ಷದವರಾಗಿದ್ದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 103 ವರ್ಷದವರಾಗಿದ್ದಾಗ ಕೊಲೊರೆಕ್ಟಲ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ವಿಶೇಷವಾಗಿ ಜಪಾನ್ ಅತ್ಯಂತ ಹಿರಿಯ ಜೀವಗಳ ನೆಲೆಯಾಗಿದೆ. ಈ ಮೊದಲು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಕರೆಯಲ್ಪಟ್ಟ ಮಸಾಜೊ ನೊನಾಕಾ ಕೂಡ ಜಪಾನ್ ದೇಶದವರು. ಆದರೆ ಅವರು ಕಳೆದ ಜನವರಿಯಲ್ಲಿ ತಮ್ಮ 113 ನೇ ವಯಸ್ಸಿನಲ್ಲಿ ಉತ್ತರ ಜಪಾನ್‌ನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು. ಜೊತೆಗೆ ಎಷ್ಟೋ ಗುರುತಿಸದ ಹಿರಿಯ ಜೀವಿಗಳು ಈ ನಾಡಿನಲ್ಲಿದ್ದರು ಎಂದು ಹೇಳಲಾಗುತ್ತದೆ.