ಆಂಧ್ರಪ್ರದೇಶದ ಮಾಜಿ ಸಿಎಂ ದಿವಂಗತ ಎನ್.ಟಿ.ರಾಮರಾವ್ ಅವರ ಮೂರ್ತಿಯನ್ನು ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಹಾನಿಮಾಡಲು ಪ್ರಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮೂರ್ತಿ ಹಾನಿ ಮಾಡಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಶಾಸಕ ಶೆಟ್ಟಿಪಿಳ್ಳೈ ಕೋಟೇಶ್ವರ್ ರಾವ್ ಅವರ ಮೇಲೆ ಎಫ್ ಐ ಆರ್ ಕೂಡ ದಾಖಲಾಗಿದೆ. ಗುಂಟೂರಿನ ದುರ್ಗಿ ಎಂಬ ಗ್ರಾಮದಲ್ಲಿದ್ದ ರಾಮರಾವ್ ಅವರ ಮೂರ್ತಿಯನ್ನು ಶಾಸಕರು, ಸುತ್ತಿಗೆಯಿಂದ ಮೂರ್ತಿಯನ್ನು ಹಾನಿ ಮಾಡಲು ಪ್ರಯತ್ನಿಸಿದ್ದರು ಎನ್ನಲಾಗಿದೆ.
ರಾಮರಾವ್ ಅವರು ಬರೋಬ್ಬರಿ ಮೂರು ಅವಧಿಗೆ ಆಂಧ್ರಪ್ರದೇಶದ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. ಆಂಧ್ರಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದರು. ಇವರ ಕಾಲಾವಧಿಯಲ್ಲಿ ಸಾಕಷ್ಟು ಯೋಜನೆಗಳು ಜಾರಿಗೆ ಬಂದಿದ್ದವು. ಅಲ್ಲದೇ, ಕಲಾವಿದರಾಗಿ ತೆಲುಗು ಚಿತ್ರರಂಗದಲ್ಲಿ ಮಿಂಚಿ ಮರೆಯಾಗಿದ್ದರು.
ಶಾಸಕರು ಮೂರ್ತಿ ಹಾನಿ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಮರಾವ್ ಅವರ ಮೊಮ್ಮಗ, ಟಿಡಿಪಿ ಸಹ ಕಾರ್ಯದರ್ಶಿ ನಾರಾ ಲೋಕೇಶ್ ಅವರು ಈ ಘಟನೆಗೆ ತೀವ್ರ ಬೇಸರ ವ್ಯಕ್ತಪಡಿಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕಠಿಣ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದಾರೆ.