ದೇಶದಲ್ಲಿ ಕೋವಿಡ್ ಮೂರನೇ ಅಲೆಯ ಭಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಹಾರದಲ್ಲಿ ಕೊರೊನಾ ಪ್ರಕರಣಗಳು ನಾಗಾಲೋಟದ ವೇಗದಲ್ಲಿ ಸಾಗುತ್ತಿರುವ ನಡುವೆಯೇ ಪಾಟ್ನಾದ ನಳಂದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ 87 ಮಂದಿ ವೈದ್ಯರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ಪಾಟ್ನಾ ಡಿಎಂ ಚಂದ್ರಶೇಖರ್ ಸಿಂಗ್, ಸೋಂಕಿಗೆ ಒಳಗಾದ ವೈದ್ಯರಲ್ಲಿ ಕೆಲವರು ಸೌಮ್ಯ ಲಕ್ಷಣಗಳನ್ನು ಹೊಂದಿದ್ದರೆ ಉಳಿದವರು ಲಕ್ಷಣ ರಹಿತ ಸೋಂಕನ್ನು ಹೊಂದಿದ್ದಾರೆ. ಇವರನ್ನು ಆಸ್ಪತ್ರೆಯ ಕ್ಯಾಂಪಸ್ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾನುವಾರದಂದು ಬಿಹಾರದಲ್ಲಿ 352 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಇದರಲ್ಲಿ ನಳಂದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ 17 ಮಂದಿ ಕಿರಿಯ ವೈದ್ಯರು ಸೇರಿದ್ದಾರೆ. ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಸಕ್ರಿಯ ಪ್ರಕರಣಗಳು ನಾಲ್ಕಂಕಿ ದಾಟಿದ್ದು 1074ಕ್ಕೆ ತಲುಪಿದೆ.
ಶುಕ್ರವಾರ ಹಾಗೂ ಶನಿವಾರ ಬಿಹಾರದಲ್ಲಿ ಕ್ರಮವಾಗಿ 281 ಹಾಗೂ 158 ಪ್ರಕರಣಗಳು ವರದಿಯಾಗಿದೆ. ಆದರೆ ಕಳೆದ ನಾಲ್ಕು ದಿನಗಳಲ್ಲಿ ಬಿಹಾರದಲ್ಲಿ ಕೋವಿಡ್ನಿಂದ ಯಾವುದೇ ಸಾವು ಸಂಭವಿಸಿಲ್ಲ. ಹೀಗಾಗಿ ಸಾವಿನ ಸಂಖ್ಯೆ 12,096ರಲ್ಲೇ ಇದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಈ ವಿಚಾರವಾಗಿ ಮಾತನಾಡಿದ ಎನ್ಎಂಸಿಹೆಚ್ ಸೂಪರಿಂಟೆಂಡೆಂಟ್ ವಿನೋದ್ ಕುಮಾರ್ ಕಳೆದ ವಾರ ನಡೆದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೈದ್ಯರು ಸೋಂಕಿನ ಲಕ್ಷಣಗಳು ಕಂಡು ಬರುತ್ತಿದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು ಎಂದು ಹೇಳಿದರು.