ಛತ್ತೀಸಗಢ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಉಷ್ಣ ವಿದ್ಯುತ್ ಸ್ಥಾವರದ ಗುತ್ತಿಗೆ ಕಾರ್ಮಿಕರ ಹೋರಾಟ ಹಿಂಸಾರೂಪಕ್ಕೆ ತಿರುಗಿ ಪೊಲೀಸರ ಮೇಲೆಯೇ ಹಲ್ಲೆ ನಡೆದ ಕುರಿತು ವರದಿಯಾಗಿದೆ.
ಗುತ್ತಿಗೆ ಆಧಾರದಲ್ಲಿ ನೌಕರರನ್ನು ಕಾಯಂ ಮಾಡಿಕೊಳ್ಳಬೇಕೆಂದು ಕಾರ್ಮಿಕರು ನಡೆಸಿದ್ದ ಈ ಪ್ರತಿಭಟನೆ ಹಿಂಸಾರೂಪ ಪಡೆಯುತ್ತಿದ್ದಂತೆ ಪರಿಸ್ಥಿತಿ ತಿಳಿಗೊಳಿಸಲು ಹೋಗಿದ್ದ ಸುಮಾರು 20 ಪೊಲೀಸರು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಅಲ್ಲಿನ ಮಾಡ್ವಾದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಉಷ್ಣ ವಿದ್ಯುತ್ ಸ್ಥಾವರದಲ್ಲಿಯೇ ಈ ಘಟನೆ ನಡೆದಿದೆ.
ಕೊರೊನಾ ಸಂಕಷ್ಟದಲ್ಲಿ ಪ್ರತಿಭಟನೆ ಸರಿಯಲ್ಲ ಎಂದು ನೌಕರಸ್ಥರಿಗೆ ಬುದ್ಧಿ ಹೇಳಿ, ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮಾಡಲು ಪೊಲೀಸರು ಹಾಗೂ ಸ್ಥಳೀಯ ಆಡಳಿತ, ಪ್ರತಿಭಟನಾ ಸ್ಥಳಕ್ಕೆ ತೆರಳಲಾಗಿತ್ತು. ಆಗ ರೊಚ್ಚಿಗೆದ್ದ ಪ್ರತಿಭಟನಾಕಾರರು ಖಾಸಗಿ ವಾಹನಕ್ಕೆ ಬೆಂಕಿ ಹಚ್ಚಿ, ಪೊಲೀಸ್ ವಾಹನಗಳನ್ನು ಜಖಂಗೊಳಿಸಿದ್ದಾರೆ. ಅಲ್ಲದೇ, ಘಟನೆಯಲ್ಲಿ 20 ಜನ ಪೊಲೀಸರು ಗಾಯಗೊಂಡಿದ್ದಾರೆ.
ರಾಜ್ಯ ವಿದ್ಯುತ್ ಕಂಪನಿ ಅಧ್ಯಕ್ಷರೊಂದಿಗೆ ಕಾರ್ಮಿಕರು ಚರ್ಚಿಸುವುದಕ್ಕಾಗಿ ಜ.4ರಂದು ಸಮಯ ನಿಗದಿ ಮಾಡಲಾಗಿತ್ತು. ಆದರೆ, ಕೆಲವು ಕಾರ್ಮಿಕರು ಭಾನುವಾರವೇ ಚರ್ಚೆಯಾಗಬೇಕು ಎಂದು ಪಟ್ಟು ಹಿಡಿದಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಪ್ರತಿಭಟನೆ ಉದ್ವಿಗ್ನ ಸ್ಥಿತಿಗೆ ತಲುಪಿತ್ತು. ಹೀಗಾಗಿ ಪರಿಸ್ಥಿತಿ ತಿಳಿಗೊಳಿಸಿ, ಅಲ್ಲಿದ್ದವರನ್ನು ಮನೆಗೆ ಕಳುಹಿಸುವುದಕ್ಕಾಗಿ ಅಲ್ಲಿಗೆ ತೆರಳಲಾಗಿತ್ತು. ಅಷ್ಟರಲ್ಲಿ ಪ್ರತಿಭಟನಾಕಾರರಿಂದ ನಮ್ಮ ಮೇಲೆ ದಾಳಿ ನಡೆಯಿತು ಎಂದು ಪೊಲೀಸರು ಹೇಳಿದ್ದಾರೆ.