ಅಲಿರಾಜ್ ಪುರ: ಚಾಲಕನ ನಿರ್ಲಕ್ಷ್ಯದಿಂದಾಗಿ ಬಸ್ ವೊಂದು ನದಿಗೆ ಬಿದ್ದ ಪರಿಣಾಮ ಮಗು ಸೇರಿದಂತೆ ಮೂವರು ಸಾವನ್ನಪ್ಪಿ, 28 ಜನ ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ದುರ್ಘಟನೆ ಮಧ್ಯಪ್ರದೇಶದ ಅಲಿರಾಜ್ ಪುರದ ಚಾಂದ್ ಪುರ ಹತ್ತಿರ ನಡೆದಿದ್ದು, ಬಸ್ ಅಲಿರಾಜ್ ಪುರದಿಂದ ಗುಜರಾತ್ ನ ಉದೇಪುರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಬಸ್ ತೆರಳುತ್ತಿದ್ದ ಸಂದರ್ಭದಲ್ಲಿ ಬಸ್ ಚಾಲಕ ನಿದ್ದೆಗೆ ಜಾರಿದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿ ಬಸ್ ಮೆಲ್ಖೋದ್ರಾ ನದಿಗೆ ಜಾರಿದೆ. ಹೀಗಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸಾವನ್ನಪ್ಪಿದವರು ಹಾಗೂ ಗಾಯಗೊಂಡವರು ಗುಜರಾತ್ ನವರಾಗಿದ್ದಾರೆ. ಘಟನೆಯಲ್ಲಿ ಒಂದು ವರ್ಷದ ಮಗು ಸೇರಿದಂತೆ ಕೈಲಾಶ್ ಮೇದಾ (48), ಮೀರಾಬಾಯಿ (46) ಸಾವನ್ನಪ್ಪಿದ್ದಾರೆ.
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.