ಹೊಸಕೋಟೆ: ಬಾಲಕರಿಬ್ಬರು ಪರಿಚಿತರ ಮನೆಗೆ ಇಬ್ಬರು ಅಪ್ರಾಪ್ತೆಯರನ್ನು ಕರೆದುಕೊಂಡು ಹೋಗಿ ಅಲ್ಲೇ ಉಳಿಸಿಕೊಂಡು ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಾಲಕರನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಹೊಸಕೋಟೆ ತಾಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿಯರಿಬ್ಬರು ಡಿಸೆಂಬರ್ 7 ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೊಸಕೋಟೆಗೆ ತೆರಳಿದ್ದವರು ರಾತ್ರಿಯಾದರೂ ಮನೆಗೆ ಮರಳಿರಲಿಲ್ಲ. ಪೋಷಕರು ಡಿಸೆಂಬರ್ 8 ರಂದು ಪೊಲೀಸರಿಗೆ ದೂರು ನೀಡಿದ್ದು, ನಂತರದಲ್ಲಿ ಠಾಣೆಗೆ ಬಂದ ಬಾಲಕಿಯರು ಹೊಸಕೋಟೆಯಿಂದ ಪರಿಚಿತ ಇಬ್ಬರು ಹುಡುಗರು ಚಿತ್ತೂರಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಅತ್ಯಾಚಾರ ಎಸಗಿರುವುದಾಗಿ ದೂರಿದ್ದಾರೆ.
17 ವರ್ಷದ ಇಬ್ಬರು ಬಾಲಕರನ್ನು ಡಿಸೆಂಬರ್ 15 ರಂದು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಚಿತ್ತೂರಿಗೆ ಹೋಗಿರಲಿಲ್ಲ. ಕೆಜಿಎಫ್ ನಲ್ಲಿ ಪರಿಚಿತರ ಮನೆಯಲ್ಲಿ ಉಳಿದುಕೊಂಡಿದ್ದು, ಅತ್ಯಾಚಾರ ಎಸಗಿರುವುದಾಗಿ ಹೇಳಿದ್ದಾರೆನ್ನಲಾಗಿದೆ. ಬಾಲಕರನ್ನು ಬಾಲಮಂದಿರಕ್ಕೆ ಬಿಡಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.