ಬೆಂಗಳೂರು: ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಕೈಗೊಂಡಿರುವ ಪಾದಯಾತ್ರೆ ರಾಜಕೀಯ ಪ್ರೇರಿತ ಎಂದು ಬಿಜೆಪಿ ಟೀಕಿಸಿದೆ. ಇದೇ ವೇಳೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ಮೇಕೆದಾಟು ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಹೊಣೆಗೇಡಿತನದ ಸಾಕ್ಷ್ಯಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರು ಮೇಕೆದಾಟು ಯೋಜನೆ ಬಗ್ಗೆ ಹೊಣೆಗೇಡಿತನ ತೋರಿಸಿದ ಸಾಕ್ಷ್ಯಗಳು ನಮ್ಮಲ್ಲಿದ್ದು, ಕೆಲವೇ ದಿನಗಳಲ್ಲಿ ಕೆಲವು ಸ್ಪೋಟಕ ಮಾಹಿತಿಗಳನ್ನು ಹೊರಹಾಕುತ್ತೇನೆ. ರಾಜಕೀಯಕ್ಕಾಗಿ ಪಾದಯಾತ್ರೆ ಕೈಗೊಳ್ಳಲಾಗಿದೆ. ಅಧಿಕಾರದಲ್ಲಿದ್ದಾಗ ನಿರ್ಲಕ್ಷಿಸುವುದು, ಕಡತ ವಿಲೇವಾರಿ ಮಾಡದೆ ಕಾಲಹರಣ ಮಾಡುವುದು, ವಿಪಕ್ಷದಲ್ಲಿದ್ದಾಗ ಪಾದಯಾತ್ರೆ ಮಾಡುವುದು ಕಾಂಗ್ರೆಸ್ ಜಾಯಮಾನವಾಗಿದೆ ಎಂದು ಟೀಕಿಸಿದ್ದಾರೆ.