ಬೆಂಗಳೂರು: ಸಾಫ್ಟ್ವೇರ್ ಉದ್ಯೋಗಿಯೊಬ್ಬರ ಫ್ಲ್ಯಾಟ್ ನಲ್ಲಿ 19 ವರ್ಷದ ಮನೆಕೆಲಸದ ಯುವತಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಜಕ್ಕಸಂದ್ರ ನಿವಾಸಿಯಾಗಿರುವ ಯುವತಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಖಾಸಗಿ ಕಂಪನಿ ಉದ್ಯೋಗಿಯಾಗಿರುವ ವಿವೇಕ್ ಬೆಳ್ಳಂದೂರಿನ ಅಪಾರ್ಟ್ಮೆಂಟ್ ನಲ್ಲಿ ಪತ್ನಿ-ಮಕ್ಕಳೊಂದಿಗೆ ವಾಸವಾಗಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಪ್ರತ್ಯೇಕ ಕೋಣೆಯಲ್ಲಿ ನೆಲೆಸಿದ್ದಳು. ಶನಿವಾರ ಬೆಳಗ್ಗೆ ಬಹಳ ಹೊತ್ತಾದರೂ ಹೊರಗೆ ಬಾರದ ಕಾರಣ ಆತಂಕಗೊಂಡ ವಿವೇಕ್ ಬಾಗಿಲು ಮುರಿದು ನೋಡಿದಾಗ ಬಾತ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಕೂಡಲೇ ಅವರು ಬೆಳ್ಳಂದೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.