ಗುಂಟೂರು: ಪ್ರೀತಿಗೆ ಸಂಸ್ಕೃತಿ, ಗಡಿ, ಜನಾಂಗ ಮತ್ತು ಧರ್ಮದ ಭೇದವಿಲ್ಲ. ಸರೋವರದಲ್ಲಿ ಪ್ರಕಾಶಮಾನವಾಗಿ ಗೋಚರಿಸುವ ಮುಂಜಾನೆಯ ಸೂರ್ಯೋದಯದಂತೆ ಇದು ಪರಿಶುದ್ಧ ಮತ್ತು ಸುಂದರ. ಇದಕ್ಕೆ ಉದಾಹರಣೆ ಎಂಬಂತೆ, ಭಾರತೀಯ ವ್ಯಕ್ತಿಯ ಜೊತೆಗೆ ಟರ್ಕಿ ಯುವತಿ ಸಪ್ತಪದಿ ತುಳಿದಿದ್ದಾರೆ.
ಇತ್ತೀಚೆಗೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ಸಾಂಪ್ರದಾಯಿಕ ಸಮಾರಂಭದಲ್ಲಿ ಇವರಿಬ್ಬರೂ ಭಾರತೀಯ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ವರ ಮಧು ಸಂಕೀರತ್ 2016 ರಲ್ಲಿ ವಧು ಗಿಜೆಮ್ ಅವರನ್ನು ಕೆಲಸದ ವಿಚಾರದಲ್ಲಿ ಭೇಟಿಯಾಗಿದ್ದರು. ನಂತರ ಈ ಭೇಟಿ ಸ್ನೇಹವಾಗಿ ಪ್ರೀತಿಗೆ ತಿರುಗಿದೆ ಎರಡೂ ಕುಟುಂಬಗಳ ಮನವೊಲಿಸಿದ ಈ ಜೋಡಿ 2019ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಂತರ ಕೋವಿಡ್ ಕಾರಣದಿಂದ ಮದುವೆಯನ್ನು ಮುಂದೂಡಲಾಗಿತ್ತು.
ಅಂತಿಮವಾಗಿ ಈ ಜೋಡಿ ಟರ್ಕಿಯ ಸಂಪ್ರದಾಯದಂತೆ 2021ರ ಜುಲೈ ತಿಂಗಳಲ್ಲಿ ಟರ್ಕಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ತೆಲುಗು ಹಿಂದೂ ಸಂಪ್ರದಾಯದಂತೆ ವರನ ತವರೂರು ಗುಂಟೂರಿನಲ್ಲಿ ವಿವಾಹವಾಗಿದ್ದಾರೆ. ವಧು ಗಿಜೆಮ್ ಸಾಂಪ್ರದಾಯಿಕ ಭಾರತೀಯರಂತೆ ಸೀರೆ ಉಟ್ಟಿದ್ದು, ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.
ಅಷ್ಟೇ ಅಲ್ಲ ಪತಿಯ ಕುಟುಂಬದೊಂದಿಗೆ ಮಾತನಾಡಲು ವಧು ಗಿಜೆಮ್ ತೆಲುಗು ಭಾಷೆ ಕಲಿಯುತ್ತಿದ್ದಾರಂತೆ.