ಮುಂಬಯಿ : ಮಹಾರಾಷ್ಟ್ರದಲ್ಲಿ ಕೊರೊನಾ ಹಾಗೂ ಹೊಸ ರೂಪಾಂತರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಆತಂಕ ಮೂಡಿಸುತ್ತಿದೆ. ಅಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯ ಶೇ. 37ರಷ್ಟು ಪ್ರಕರಣಗಳು ಓಮಿಕ್ರಾನ್ ರೂಪಾಂತರಿಯಾಗಿ ಪತ್ತೆಯಾಗುತ್ತಿದೆ ಎನ್ನಲಾಗಿದೆ.
ಈ ಕುರಿತು ಬೃಹತ್ ಮುನ್ಸಿಪಲ್ ಕಾರ್ಪೊರೇಷನ್ ತಿಳಿಸಿದ್ದು, ಅಲ್ಲಿ ಯಾವುದೇ ವಿದೇಶಿ ಪ್ರಯಾಣದ ಹಿನ್ನೆಲೆ ಹೊಂದಿರದ ಜನರಲ್ಲಿ ಕೂಡ ಓಮಿಕ್ರಾನ್ ಪತ್ತೆಯಾಗಿದೆ. ಕೊರೊನಾ ಮಾದರಿಗಳಲ್ಲಿ ಶೇ. 37ರಷ್ಟು ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿದೆ.
ಮುಂಬಯಿನಲ್ಲಿ ಇಲ್ಲಿಯವರೆಗೂ 153 ಜನರಲ್ಲಿ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಕೇವಲ 12 ಜನರು ಮಾತ್ರ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದರು. ಇನ್ನುಳಿದವರ ಹಿನ್ನೆಲೆ ಸ್ಥಳೀಯವಾಗಿಯೇ ಇದೆ. 21 ಜನರು ಜುಹು, ವರ್ಸೋವಾದ ಕೆ-ವೆಸ್ಟ್ ವಾರ್ಡ್ ನಿಂದ ಬಂದವರಾಗಿದ್ದರೆ, 141 ಜನ ಓಮಿಕ್ರಾನ್ ಸೋಂಕಿತರು ಮುಂಬಯಿ ನಗರ ನಿವಾಸಿಗರಾಗಿದ್ದಾರೆ ಎನ್ನಲಾಗಿದೆ.
ಅಲ್ಲಿ ಇಲ್ಲಿಯವರೆಗೆ ಸಂಗ್ರಹಿಸಿರುವ 375 ಜನರ ಮಾದರಿಗಳಲ್ಲಿ 141 ಮಾದರಿಗಳು ಓಮಿಕ್ರಾನ್ ರೂಪಾಂತರಿಯಾಗಿವೆ. ಆದರೆ, ಇವುಗಳಲ್ಲಿ ಯಾವುದೇ ಅಂತಾರಾಷ್ಟ್ರೀಯ ಪ್ರಯಾಣ ಹೊಂದಿಲ್ಲ. 52 ಜನ ಮಹಿಳೆಯರು ಇದ್ದರೆ, 89 ಜನ ಪುರುಷರು ಇದ್ದಾರೆ ಎನ್ನಲಾಗಿದೆ.
ಆದರೆ, ಈ ಪೈಕಿ 93 ಜನರು ಕೋವಿಡ್ ನ ಎರಡೂ ಲಸಿಕೆ ಪಡೆದಿದ್ದಾರೆ. ಮೂವರು ಮಾತ್ರ ಒಂದು ಡೋಸ್ ಲಸಿಕೆ ಪಡೆದಿದ್ದಾರೆ. ಇನ್ನುಳಿದವರು ಲಸಿಕೆ ಪಡೆದಿಲ್ಲ. 95 ಜನರಲ್ಲಿ ಓಮಿಕ್ರಾನ್ ನ ಲಕ್ಷಣಗಳಿಲ್ಲ. 39 ಜನರಲ್ಲಿ ಸೌಮ್ಯ ಲಕ್ಷಣ ಇದ್ದರೆ, 7 ಜನರಲ್ಲಿ ಮಾತ್ರ ಮಧ್ಯಮ ರೋಗ ಲಕ್ಷಣಗಳಿವೆ ಎಂದು ತಿಳಿದು ಬಂದಿದೆ.