ವೈವಾಹಿಕ ಸಂಬಂಧಗಳಲ್ಲಿ ಪತಿ ಪತ್ನಿಯ ನಡುವೆ ಇರುವ ಭಿನ್ನಾಭಿಪ್ರಾಯಗಳಿಂದಾಗಿ ಮಕ್ಕಳ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಪೋಷಕರ ನಡುವಿನ ವಿವಾದದಿಂದ ಮಕ್ಕಳಿಗೆ ಯಾವುದೇ ತೊಂದರೆ ಉಂಟಾಗಬಾರದು ಎಂದು ಹೇಳಿದ ಸುಪ್ರೀಂ ಕೋರ್ಟ್, ಸೇನಾ ಅಧಿಕಾರಿಯೊಬ್ಬರಿಗೆ ತಮ್ಮ 13 ವರ್ಷದ ಮಗನು ಪ್ರೌಡಾವಸ್ಥೆಗೆ ಬರುವವರೆಗೂ ಆತನ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.
ನ್ಯಾಯಮೂರ್ತಿ ಎಂ.ಆರ್ ಷಾ ಹಾಗೂ ನ್ಯಾಯಮೂರ್ತಿ ಎಎಸ್ ಬೋಪಣ್ಣ ಅವರಿದ್ದ ಪೀಠವು 2011ರಿಂದ ಬೇರಾಗಿ ವಾಸಿಸುತ್ತಿದ್ದ ಸೇನಾಧಿಕಾರಿ ಪತಿ ಹಾಗೂ ಆತನ ಪತ್ನಿಗೆ ವಿಚ್ಛೇಧನ ನೀಡಿದೆ. ಪತ್ನಿಗೆ ಜೀವನಾಂಶದ ರೂಪದಲ್ಲಿ ಹಣವನ್ನು ನೀಡುವಂತೆ ಪೀಠ ಸೂಚನೆ ನೀಡಿದೆ. ಇಬ್ಬರ ನಡುವಿನ ವಿವಾಹವು ಮುರಿದು ಹೋಗಿದೆ. ಇದನ್ನು ಸರಿಪಡಿಸಲು ಸಾಧ್ಯವೇ ಇಲ್ಲ. ಪತಿಗೆ ಈಗಾಗಲೇ ಇನ್ನೊಂದು ಮದುವೆಯಾಗಿದೆ. ಹೀಗಾಗಿ ವಿಚ್ಚೇದನವೊಂದೇ ಇದಕ್ಕೆ ದಾರಿ ಎಂದು ಪೀಠ ಹೇಳಿದೆ.
ವೈವಾಹಿಕ ಸಂಬಂಧದಿಂದ ವ್ಯಕ್ತಿಯು ಹೊರಬಂದರೂ ಸಹ ಮಗುವಿನ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪತಿ – ಪತ್ನಿ ನಡುವ ಕಲಹ ಏನೇ ಇದ್ದರೂ ಸಹ ಇದರಿಂದ ಮಗುವಿನ ಜೀವನಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು. ಹೀಗಾಗಿ ದಂಪತಿಯ ಪುತ್ರ ದೊಡ್ಡವನಾಗುವವರೆಗೂ ತಂದೆಯೇ ಜವಾಬ್ದಾರಿಯನ್ನು ನೋಡಿಕೊಳ್ಳಬೇಕು ಎಂದು ಹೇಳಿದೆ.