ಕ್ರಿಸ್ಮಸ್ ದಿನದಂದು ವಿದ್ಯಾರ್ಥಿಗಳಿಗೆ ಮಾಂಸಾಹಾರ ಬಡಿಸಿದ ಆರೋಪದ ಮೇಲೆ ಶಾಲೆಯನ್ನ ಮುಚ್ಚುವಂತೆ ಬ್ಲಾಕ್ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಸೇಂಟ್ ಪಾಲ್ಸ್ ಶಾಲೆಯಲ್ಲಿ ಕ್ರಿಸ್ಮಸ್ ದಿನದಂದು ಮಕ್ಕಳಿಗೆ ಮಾಂಸಾಹಾರ ನೀಡಲಾಗಿದೆ ಎಂದು ವರದಿಯಾಗಿದೆ.
ಶಾಲಾ ಅಧಿಕಾರಿಗಳಿಗೆ ಪತ್ರ ಬರೆದಿರುವ ಬ್ಲಾಕ್ ಶಿಕ್ಷಣಾಧಿಕಾರಿ, “ನೀವು ಕ್ರಿಸ್ಮಸ್ ಹಬ್ಬದಂದು ಮಾಂಸಾಹಾರ ಬಡಿಸಿರುವುದು ನಮ್ಮ ಗಮನಕ್ಕೆ ಬಂದಿದ್ದು, ಇದರಿಂದ ಇಲಾಖೆ ಹಾಗೂ ಸಾರ್ವಜನಿಕರು ಮುಜುಗರಕ್ಕೊಳಗಾಗುವಂತಾಗಿದೆ. ಹೀಗಾಗಿ ಮುಂದಿನ ಆದೇಶದವರೆಗೆ ಶಾಲೆ ತೆರೆಯುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು.
ಈ ಘಟನೆಯ ಬಗ್ಗೆ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಾಗ ಶಾಲೆ ಮುಚ್ಚುವ ಆದೇಶವನ್ನು ರದ್ದುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಅಥವಾ ಶಿಕ್ಷಣ ಇಲಾಖೆಗೆ ಮಾಹಿತಿ ನೀಡದೆ ಸ್ಥಳೀಯ ಅಧಿಕಾರಿ ಶಾಲೆ ಮುಚ್ಚುವಂತೆ ಆದೇಶ ನೀಡಿದ್ದರು ಎನ್ನಲಾಗಿದೆ.
ಮಾಂಸಾಹಾರ ನೀಡಿದರು ಎನ್ನುವ ಕಾರಣಕ್ಕೆ ನಾವು ಶಾಲೆ ಮುಚ್ಚಲಾಗುವುದಿಲ್ಲ ಎಂದಿರುವ ಶಿಕ್ಷಣ ಇಲಾಖೆ, ಆದೇಶವನ್ನ ಹಿಂಪಡೆಯಲಾಗಿದೆ ಎಂದು ಶುಕ್ರವಾರ ತಿಳಿಸಿದೆ. ಈ ಹಿಂದೆ ಬಲಪಂಥೀಯ ಗುಂಪು ಈ ಶಾಲೆ ಮಕ್ಕಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸುತ್ತಿದೆ ಮತ್ತು ಬೈಬಲ್ ಅನ್ನು ನಂಬುವಂತೆ ಬ್ರೈನ್ ವಾಶ್ ಮಾಡುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿತ್ತು.