13 ಮಿಲಿಯನ್ ಜನಸಂಖ್ಯೆ ಇರುವ ವಾಯುವ್ಯ ಚೀನಾದ ಕ್ಸಿಯಾನ್ ನಗರವು ಒಂದು ವಾರದಿಂದ ಲಾಕ್ ಆಗಿದೆ. ನಗರದಲ್ಲಿ ಕೊರೋನಾ ಹೆಚ್ಚಾಗ್ತಿದ್ದಂತೆ ಸೋಂಕು ನಿಯಂತ್ರಿಸಲು ಲಾಕ್ ಡೌನ್ ಹೇರಲಾಗಿದೆ. ಕ್ಸಿಯಾನ್ ಲಾಕ್ ಡೌನ್ ಆಗಿ ಇಂದಿಗೆ ಒಂಭತ್ತನೇ ದಿನ. ಲಾಕ್ ಡೌನ್ ಪರಿಣಾಮವಾಗಿ ಅಲ್ಲಿನ ನಿವಾಸಿಗಳು ಆಹಾರವಿಲ್ಲದೆ, ಅದಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿಗೆ ತಲುಪಿದ್ದಾರೆ.
ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, ಬುಧವಾರದಂದು 156 ಪ್ರಕರಣಗಳು ಪತ್ತೆಯಾಗಿದ್ದವು. ಅದರಲ್ಲಿ 155 ಕ್ಸಿಯಾನ್‌ನ ನಿವಾಸಿಗಳು ಹಾಗೂ ಓರ್ವ ಗುವಾಂಗ್ಕ್ಸಿಯ ದಕ್ಷಿಣ ಪ್ರದೇಶದ ನಿವಾಸಿ.
ಡಿಸೆಂಬರ್ 9 ರಿಂದ, 13 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಕ್ಸಿಯಾನ್‌ನಲ್ಲಿ 1,117 ಪ್ರಕರಣಗಳು ವರದಿಯಾಗಿವೆ. ಎಂಟನೇ ದಿನಕ್ಕೆ ಹೊಸ ಸುತ್ತಿನ ಸಾಮೂಹಿಕ ಪರೀಕ್ಷೆ ಆರಂಭಗೊಂಡಿದ್ದು, ಟೆರಾಕೋಟಾ ವಾರಿಯರ್ಸ್‌ಗೆ ಹೆಸರುವಾಸಿಯಾಗಿರುವ ನಗರದಲ್ಲಿ ಎಲ್ಲಾ ಸಾರ್ವಜನಿಕ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಕಳೆದ 21 ತಿಂಗಳಲ್ಲಿ ಚೀನಾದಲ್ಲಿ ಕೊರೋನಾ ಪ್ರಕರಣಗಳೆ ಇರಲಿಲ್ಲ. ಈಗ ಏಕಾಏಕಿ ಸೋಂಕು ಉಲ್ಬಣವಾಗುತ್ತಿದ್ದು, ಕ್ಸಿಯಾನ್ ಹಾಟ್ ಸ್ಪಾಟ್ ಆಗಿ ಹೊರಹೊಮ್ಮಿದೆ. ಕ್ಸಿಯಾನ್ ನಗರದ ಸರ್ಕಾರಿ ಅಧಿಕಾರಿಯೊಬ್ಬರು ಈ ಪ್ರದೇಶ ಈಗ ಮಾಡು ಇಲ್ಲವೇ ಮಡಿ ಅನ್ನೋ ಸ್ಥಿತಿಗೆ ತಲುಪಿದೆ ಎಂದು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್ ಹಾಕಿದ ಆರೋಗ್ಯ ಇಲಾಖೆ
ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಈ ಸಂಖ್ಯೆ ಅತ್ಯಂತ ಚಿಕ್ಕದಾಗಿರಬಹುದು ಆದರೆ, ತ್ವರಿತವಾಗಿ ಕಾರ್ಯ ಪ್ರವೃತ್ತರಾಗದಿದ್ದರೆ ಸಣ್ಣದಾಗಿರುವ ಪ್ರಕರಣಗಳು ಮುಂದೆ ದೊಡ್ಡದಾಗಿ ಬೆಳೆಯಬಹುದು ಎಂಬುದು ಚೀನಾದ ಲೆಕ್ಕಾಚಾರ. ಈ ಕ್ಲಸ್ಟರ್ ಶುರುವಾದ್ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಚೀನಾ ಸರ್ಕಾರ, ಆ ಪ್ರದೇಶದ ಜನರನ್ನ ಮನೆಯಿಂದ ಹೊರಗೆ ಬರದಂತೆ ನಿರ್ಬಂಧ ಏರಿದೆ. ಈ ನಿರ್ಬಂಧಗಳಿಂದ ಮೂಲಭೂತ ಸೌಕರ್ಯ ಹಾಗೂ ಅಗತ್ಯ ವಸ್ತುಗಳ ಪೂರೈಕೆಯಾಗದೆ ಕ್ಸಿಯಾನ್‌ನಲ್ಲಿ ಈ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ.