ಭಾರತದ 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟಾರೆಯಾಗಿ ಈವರೆಗೆ 961 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಇದರಲ್ಲಿ 320 ಮಂದಿ ಈಗಾಗಲೇ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಅಂದರೆ 263 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಎರಡನೇ ಸ್ಥಾನದಲ್ಲಿ 257 ಪ್ರಕರಣಗಳನ್ನು ಮಹಾರಾಷ್ಟ್ರ ವರದಿ ಮಾಡಿದೆ. ಗುಜರಾತ್ನಲ್ಲಿ 97, ರಾಜಸ್ಥಾನದಲ್ಲಿ 69 ಹಾಗೂ ಕೇರಳದಲ್ಲಿ 65 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 13,154 ಕೊರೊನಾ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,48,22,040 ಆಗಿದೆ. ದೇಶದಲ್ಲಿ ಪ್ರಸ್ತುತ 82,402 ಆಕ್ಟಿವ್ ಪ್ರಕರಣಗಳಿವೆ. ದೇಶದಲ್ಲಿ ಒಂದೇ ದಿನದಲ್ಲಿ 268 ಕೊರೊನಾ ಸಾವು ಸಂಭವಿಸಿದ್ದು ಈ ಮೂಲಕ ಕೊರೊನಾದಿಂದಾಗಿ ದೇಶದಲ್ಲಿ ಒಟ್ಟು 4,80,860 ಮಂದಿ ಕೊರೊನಾದಿಂದ ಮೃತಪಟ್ಟಂತಾಗಿದೆ. ಬುಧವಾರಕ್ಕೆ ಹೋಲಿಸಿದರೆ ಇಂದು ಕೋವಿಡ್ ಪ್ರಕರಣಗಳಲ್ಲಿ ಶೇ.43 ರಷ್ಟು ಹೆಚ್ಚಳ ಕಂಡಿದೆ.
ದೇಶದಲ್ಲಿ COVID-19 ಸಂಖ್ಯೆಯು ಆಗಸ್ಟ್ 7, 2020 ರಂದು 20 ಲಕ್ಷದ ಗಡಿಯನ್ನು ದಾಟಿದೆ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ಗಡಿ ದಾಟಿದೆ. ಸೆಪ್ಟೆಂಬರ್ 28 ರ ವೇಳೆಗೆ 60 ಲಕ್ಷ, ಅಕ್ಟೋಬರ್ 11 ರಂದು 70 ಲಕ್ಷವನ್ನು ದಾಟಿದೆ. ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿಯನ್ನು ಮೀರಿದೆ. ಭಾರತವು ಮೇ 4 ರಂದು ಎರಡು ಕೋಟಿ ಮತ್ತು ಜೂನ್ 23 ರಂದು ಮೂರು ಕೋಟಿ ಎಂಬ ಭೀಕರ ಮೈಲಿಗಲ್ಲನ್ನು ದಾಟಿದೆ.