ಕೋಲಾರ: ಅಂತ್ಯಸಂಸ್ಕಾರದ ಸ್ಥಳ ವಿವಾದ ಕಾರಣದಿಂದ ಮೂರು ದಿನ ಮೃತದೇಹವನ್ನು ಮನೆಯಲ್ಲಿ ಇಟ್ಟುಕೊಂಡಿದ್ದು, ಕೊನೆಗೆ ಮಾಹಿತಿ ತಿಳಿದ ತಹಶೀಲ್ದಾರ್ ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ನೆರವಿನಿಂದ ಸರ್ಕಾರಿ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ಕೆಜಿಎಫ್ ತಾಲೂಕಿನಲ್ಲಿ ನಡೆದಿದೆ.
ರಾಜಪೇಟೆ ರೋಡ್ ನಲ್ಲಿ ಕುಟುಂಬದವರ ನಡುವೆ ವೈಮನಸ್ಯದಿಂದಾಗಿ 3 ದಿನ ಕಳೆದರೂ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಿರಲಿಲ್ಲ.
ರಾಜಪೇಟೆ ರೋಡ್ ನಿವಾಸಿ ಸರೋಜಮ್ಮ(80) ಅನಾರೋಗ್ಯದ ಕಾರಣ ಆಂಧ್ರಪ್ರದೇಶದಲ್ಲಿ ನಿಧನರಾಗಿದ್ದು, ಅವರಿಗೆ ಮಕ್ಕಳು ಇರಲಿಲ್ಲವಾದ್ದರಿಂದ ಸರೋಜಮ್ಮನವರ ಗಂಡನ ಎರಡನೇ ಪತ್ನಿಯ ಇಬ್ಬರು ಹೆಣ್ಣುಮಕ್ಕಳು ದೊಡ್ಡಮ್ಮನ ಮೃತದೇಹವನ್ನು ಹೂಳಲು ರಾಜಪೇಟೆ ರೋಡ್ ಗೆ ತಂದಿದ್ದಾರೆ.
ತಮ್ಮ ಜಮೀನಿನಲ್ಲಿದ್ದ ತಂದೆಯ ಸಮಾಧಿ ಪಕ್ಕದಲ್ಲಿಯೇ ಸರೋಜಮ್ಮ ಅವರ ಅಂತ್ಯಸಂಸ್ಕಾರ ನೆರವೇರಿಸಲು ಹೆಣ್ಣುಮಕ್ಕಳು ಮುಂದಾಗಿದ್ದು, ಆ ಹೆಣ್ಣುಮಕ್ಕಳ ಸ್ವಂತ ತಾಯಿ ಮತ್ತು ಸಹೋದರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರಕ್ಕೆ ಮೂರು ದಿನ ಮೃತದೇಹ ಹಾಗೇ ಉಳಿದಿದೆ. ಕೊನೆಗೆ ಗ್ರಾಮಸ್ಥರು ಅಂತ್ಯಸಂಸ್ಕಾರ ನೆರವೇರಿಸುವಂತೆ ತಿಳಿಸಿದ್ದರಿಂದ ಮನೆಯಲ್ಲಿ ಗಲಾಟೆಯಾಗಿ ಹೆಣ್ಣುಮಕ್ಕಳು ಊರಿಗೆ ಮರಳಿದ್ದಾರೆ.
ಗ್ರಾಮಸ್ಥರಿಂದ ವಿಷಯ ತಿಳಿದ ತಹಶೀಲ್ದಾರ್ ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ನೆರವಿನಿಂದ ಸರ್ಕಾರಿ ಸ್ಮಶಾನದಲ್ಲಿ ಸರೋಜಮ್ಮನವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆನ್ನಲಾಗಿದೆ.